ಹಾನಿಕಾರಕ ತ್ಯಾಜ್ಯ ವಸ್ತುಗಳನ್ನು ನದಿಗೆ ಬಿಟ್ಟರೆ ಕಾನೂನು ಕ್ರಮ
ಗೋಕಾಕ : ನಗರದ ಹೊರವಲಯದಲ್ಲಿರುವ ರಾಕೇಟ್ ಇಂಡಿಯಾ ಲಿ., ಕಾರ್ಖಾನೆಯು ರಾಸಾಯನಿಕಗಳಿಂದ ಕೂಡಿದ ಹಾನಿಕಾರಕ ತ್ಯಾಜ್ಯ ವಸ್ತುಗಳನ್ನು ಮಾರ್ಕಂಡೇಯ ನದಿಗೆ ಬಿಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ನದಿ ತೀರದ ಜಮೀನುಗಳಲ್ಲಿ ರೈತರು ಬೆಳೆದ ಬೆಳೆಗಳು ಹಾನಿಯಾಗುತ್ತವೆ. ಮಾರಕವಾಗುವ ತ್ಯಾಜ್ಯ ವಸ್ತುಗಳನ್ನು ಇನ್ನು ಮುಂದೆ ನದಿಗೆ ಬಿಟ್ಟರೆ ಕಾರ್ಖಾನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಎಚ್ಚರಿಕೆ ನೀಡಿದ್ದಾರೆ.
ಹಲವಾರು ವರ್ಷಗಳಿಂದ ನದಿ ತೀರದಲ್ಲಿರುವ ಕಾರ್ಖಾನೆಗಳು ತ್ಯಾಜ್ಯ ವಸ್ತುಗಳನ್ನು ನದಿಗೆ ಬಿಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿದೆ. ಪ್ರವಾಹ ಭೀತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮಾರ್ಕಂಡೇಯ ನದಿಗೆ ರಾಸಾಯನಿಕ ವಸ್ತುಗಳನ್ನು ಈಗಲೂ ಬಿಡುತ್ತಿದ್ದಾರೆ. ಮಾರ್ಕಂಡೇಯ ನದಿಗೆ ಬಿಡುವುದರಿಂದ ಘಟಪ್ರಭಾ ನದಿಗೆ ಸೇರಿ ಪರಿಸರಕ್ಕೆ ಹಾನಿಯಾಗುತ್ತದೆ. ಜಲಚರಗಳು ಸಾಯುತ್ತವೆ. ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ರೈತರ ಬೆಳೆಗಳು ಸಹ ನಾಶವಾಗುತ್ತಿವೆ. ಜನ ಹಾಗೂ ಜಾನುವಾರುಗಳು ಘಟಪ್ರಭಾ ನದಿಯ ನೀರು ಕುಡಿಯುವುದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇದಕ್ಕೆ ಕಾರ್ಖಾನೆಯವರನ್ನೇ ನೇರ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಹಾನಿಯಾಗುವ ರೈತರ ಬೆಳೆಗಳ ನಷ್ಟವನ್ನು ಕಾರ್ಖಾನೆಯವರೇ ಭರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕಾರ್ಖಾನೆಯವರು ಪರಿಸರ ಮಾಲಿನ್ಯ ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶುದ್ಧೀಕರಣ ಘಟಕಗಳಿಂದ ತ್ಯಾಜ್ಯಗಳನ್ನು ಶುದ್ಧೀಕರಿಸಬೇಕು. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಯಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅವರು ಕಾರ್ಖಾನೆಯವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ರಾಕೇಟ್ ಇಂಡಿಯಾ ಲಿ., ಕಾರ್ಖಾನೆಗೆ ಕೂಡಲೇ ನೋಟೀಸು ಜಾರಿ ಮಾಡುವಂತೆ ತಹಶೀಲ್ದಾರ ಅವರಿಗೆ ಬಾಲಚಂದ್ರ ಜಾರಕಿಹೊಳಿ ಅವರು ಸೂಚಿಸಿದ್ದಾರೆ.
ಪ್ರವಾಹ ಮಟ್ಟ ಇಳಿಕೆ : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಮಳೆ ಕಡಿಮೆಯಾಗುತ್ತಿರುವುದರಿಂದ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ಹರಿಬಿಟ್ಟಿರುವ ನೀರು 82295 ಕ್ಯೂಸೆಕ್ಸ್ ನೀರಿನಿಂದ 62280 ಕ್ಯೂಸೆಕ್ಸ್‍ಗೆ ನೀರು ಇಳಿಕೆಯಾಗಿದೆ. ಬುಧವಾರ ಸಂಜೆಯ ಮಾಹಿತಿಯಂತೆ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ 34000 ಕ್ಯೂಸೆಕ್ಸ್, ಹಿರಣ್ಯಕೇಸಿ ನದಿಯಿಂದ 17450 ಕ್ಯೂಸೆಕ್ಸ್, ಮಾರ್ಕಂಡೇಯ ನದಿಯಿಂದ 3880 ಕ್ಯೂಸೆಕ್ಸ್ ಹಾಗೂ ಬಳ್ಳಾರಿ ನಾಲೆಯಿಂದ 6950 ಕ್ಯೂಸೆಕ್ಸ್ ನೀರು ಬರುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ನಾಳೆಯೊಳಗೆ ಬೆಳಗಾವಿ-ವಿಜಯಪುರ-ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ನದಿಯ ನೀರಿನ ಪ್ರಮಾಣ ಇಳಿಕೆಯಾಗುತ್ತಿರುವುದರಿಂದ ನದಿ ತೀರದ ನಿರಾಶ್ರಿತರಿಗೆ ಯಾವುದೇ ಆತಂಕವಿಲ್ಲ. ಎಲ್ಲರೂ ನೆಮ್ಮದಿಯಿಂದ ಇರಬೇಕು. ಇನ್ನೆರಡು ದಿನ ನಿರಾಶ್ರಿತರಿಗಾಗಿ ತೆರೆಯಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಇದ್ದುಕೊಂಡು ಪ್ರವಾಹ ಇಳಿಕೆ ನಂತರ ತಮ್ಮ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತೆರಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.