ಘಟಪ್ರಭಾ : ಜಲಜೀವನ ಮಿಷನ್ ಕಾಮಗಾರಿಗಾಗಿ ರಾಜಾಪೂರ, ತುಕ್ಕಾನಟ್ಟಿ, ದಂಡಾಪೂರ, ದುರದುಂಡಿ ಹಾಗೂ ಬಡಿಗವಾಡ ಗ್ರಾಮ ಪಂಚಾಯತಿಗಳಿಗೆ 8.17 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸೋಮವಾರದಂದು ಇಲ್ಲಿಗೆ ಸಮೀಪದ ರಾಜಾಪೂರ ಗ್ರಾಮದಲ್ಲಿ 8.17 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯಿಂದಾಗಿ ಮನೆ ಮನೆಗೆ ನಳಗಳ ಜೋಡಣೆಯಿಂದ ಕುಡಿಯುವ ನೀರು ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.
ರಾಜಾಪೂರ ಗ್ರಾಮದಲ್ಲಿ 1.42 ಕೋಟಿ ರೂ., ತುಕ್ಕಾನಟ್ಟಿ ಗ್ರಾಮದಲ್ಲಿ 1.46 ಕೋಟಿ ರೂ., ದಂಡಾಪೂರ ಗ್ರಾಪಂ ವ್ಯಾಪ್ತಿಯಲ್ಲಿ 1.31 ಕೋಟಿ ರೂ., ದುರದುಂಡಿ ಗ್ರಾಪಂ ವ್ಯಾಪ್ತಿಯಲ್ಲಿ 2.49 ಕೋಟಿ ರೂ. ಹಾಗೂ ಬಡಿಗವಾಡ ಗ್ರಾಮದಲ್ಲಿ 1.49 ಕೋಟಿ ರೂ., ವೆಚ್ಚದ ಜೆಜೆಎಂ ಕಾಮಗಾರಿಗಳಿಗಾಗಿ ಅನುದಾನ ಬಂದಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸಿದಂತಾಗಿದೆ ಎಂದು ಹೇಳಿದರು.
ರಾಜಾಪೂರ ಗ್ರಾಮದಲ್ಲಿ 891 ನಳಗಳಿಗೆ 2.50 ಲಕ್ಷ ಲೀಟರ್ ಸಾಮಥ್ರ್ಯದ ಮೇಲ್ಮಟ್ಟದ ಜಲಸಂಗ್ರಹಾಲಯ, ತುಕ್ಕಾನಟ್ಟಿ ಗ್ರಾಮದಲ್ಲಿ 1478 ನಳಗಳಿಗೆ 1 ಲಕ್ಷ ಲೀಟರ್ ಸಾಮಥ್ರ್ಯದ ಮೇಲ್ಮಟ್ಟದ ಜಲಸಂಗ್ರಹಾಲಯ, ದಂಡಾಪೂರ ಗ್ರಾಮ ಪಂಚಾಯತ ವ್ಯಾಪ್ತಿಯ 888 ನಳಗಳಿಗೆ 1 ಲಕ್ಷ ಲೀ, ದುರದುಂಡಿ-ಮಹಾಂತೇಶ ನಗರ, ಸತ್ತಿಗೇರಿ ತೋಟದ 2021 ನಳಗಳಿಗೆ 3 ಲಕ್ಷ ಲೀ, ಮತ್ತು ಬಡಿಗವಾಡ ಗ್ರಾಮದಲ್ಲಿ 911 ನಳಗಳಿಗೆ 2 ಲಕ್ಷ ಲೀ., ಸಾಮಥ್ರ್ಯ ಮೇಲ್ಮಟ್ಟದ ಜಲಸಂಗ್ರಹಾಲಯಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ನೀರು ಅಮೂಲ್ಯವಾದದ್ದು. ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳಿ. ರೈತರ ಕೃಷಿ ಜಮೀನುಗಳಿಗೆ ನೀರು ಹಾಯಿಸಲು ಈಗಾಗಲೇ ಘಟಪ್ರಭಾ ಕಾಲುವೆಗಳಿಂದ ನೀರು ಹರಿಯುತ್ತಿದೆ. ದೇವರ ದಯೆಯಿಂದ ಇದುವರೆಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಎಪ್ರೀಲ್-ಮೇ ತಿಂಗಳಲ್ಲಿ ಬೇಸಿಗೆ ಬರುವುದರಿಂದ ರೈತರಿಗೆ ಮತ್ತೊಮ್ಮೆ ಹಿಡಕಲ್ ಜಲಾಶಯದಿಂದ ನೀರನ್ನು ಬಿಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜಾಪೂರ ಗ್ರಾಮಸ್ಥರ ಬೇಡಿಕೆಯಂತೆ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಗ್ರಾಮ ಪಂಚಾಯತಿ ಚುನಾವಣೆ ಮುಗಿದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿಗೆ ಟೊಂಕುಕಟ್ಟಿ ನಿಲ್ಲುವಂತೆ ಹೇಳಿದರು.
ತುಕ್ಕಾನಟ್ಟಿ ಜಿಪಂ ಸದಸ್ಯೆ ಕಸ್ತೂರಿ ಕಮತಿ, ತಾಪಂ ಸದಸ್ಯೆ ಸಂಗೀತಾ ಯಕ್ಕುಂಡಿ, ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಾಜು ಬೈರುಗೋಳ, ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಎಪಿಎಂಸಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಘಯೋನೀಬಮಹಾ ಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಪ್ರಭಾಶುಗರ ಮಾಜಿ ನಿರ್ದೇಶಕ ಬಸವಂತ ಕಮತಿ, ಗ್ರಾಪಂ ಅಧ್ಯಕ್ಷ ಸಿದ್ರಾಯಿ ಮರಿಸಿದ್ದಪ್ಪಗೋಳ, ಪ್ರಭಾಶುಗರ ನಿರ್ದೇಶಕರಾದ ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗ ಪೂಜೇರಿ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಮೂರ್ತಿ ಹುಕ್ಕೇರಿ, ಬಸು ಸನದಿ, ತುಕ್ಕಾನಟ್ಟಿ ಗ್ರಾಪಂ ಅಧ್ಯಕ್ಷ ಕುಮಾರ ಮರ್ದಿ, ಬಸವರಾಜ ಪಂಡ್ರೋಳ್ಳಿ, ಮಹಾದೇವ ತುಕ್ಕಾನಟ್ಟಿ, ಭೈರು ಯಕ್ಕುಂಡಿ, ರಾಮಚಂದ್ರ ಪಾಟೀಲ, ಸಿದ್ದಪ್ಪ ಅಂತರಗಟ್ಟಿ, ಇಂದಿರಾ ಅಂತರಗಟ್ಟಿ, ಚಿಕ್ಕೋಡಿ ಗ್ರಾಕುನೀಸ ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎ.ಎಸ್. ಬಣಗಾರ, ಎಇಇ ಆಯ್.ಎಂ. ದಫೆದಾರ, ಜೆಇ ಎನ್.ಎಸ್. ಲಮಾಣಿ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 8.17 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ರಾಜಾಪೂರ ಹಾಗೂ ಸುತ್ತಲಿನ ಗ್ರಾಮಗಳ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಸಕರನ್ನು ಹೃದಯಸ್ಪರ್ಶಿಯಾಗಿ ಸತ್ಕರಿಸಿದರು.