Breaking News

ನೆರೆ ಸಂತ್ರಸ್ಥರ ಮನೆಗಳ ತಾಂತ್ರಿಕ ದೋಷವನ್ನು ಕೂಡಲೇ ನಿವಾರಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ


ಮೂಡಲಗಿಯಲ್ಲಿ ಸಂಸದ ಈರಣ್ಣ ಕಡಾಡಿ ಅವರೊಂದಿಗೆ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ನೆರೆ ಹಾವಳಿ ಸಮಯದಲ್ಲಿ ಕುಸಿದು ಬಿದ್ದಿರುವ ಮನೆಗಳ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡುವ ವ್ಯವಸ್ಥೆ ಕೂಡಲೇ ಮಾಡಬೇಕು. ಹೈಡ್/ಡೆಲಿಟ್ ಆದ ಮನೆಗಳ ತಾಂತ್ರಿಕ ದೋಷವನ್ನು ಕೂಡಲೇ ನಿವಾರಿಸಬೇಕು. ಮಾರ್ಚ ತಿಂಗಳ ಅಂತ್ಯದೊಳಗೆ ವಸತಿ ಇಲಾಖೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಶುಕ್ರವಾರದಂದು ಜರುಗಿದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಂತ್ರಸ್ತರ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

ಪ್ರವಾಹ ಮತ್ತು ನಿರಂತರ ಮಳೆಯಿಂದ ಅರಭಾವಿ ಕ್ಷೇತ್ರದ 29 ಗ್ರಾಮಗಳು ಜಲಾವೃತಗೊಂಡಿದ್ದರಿಂದ ಸಂತ್ರಸ್ಥರ ಸ್ಥಿತಿ ಕಷ್ಟಕರವಾಗಿತ್ತು. ಒಟ್ಟು 1887 ಮನೆಗಳ ಪೈಕಿ 1495 ಮನೆಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಇನ್ನುಳಿದ 392 ಮನೆಗಳಿಗೆ ಜಿಲ್ಲಾಧಿಕಾರಿಗಳ ಅನುಮೋದನೆ ಬಾಕಿ ಇದೆ. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಾರ್ಚ ತಿಂಗಳೊಳಗೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಹದಗೆಟ್ಟಿರುವ ರಸ್ತೆಗಳ ಸುಧಾರಣೆಗೆ ಈಗಾಗಲೇ ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಗಳಿಂದ ಅನುದಾನ ಬಿಡುಗಡೆಯಾಗಿದ್ದು, ಬಾಕಿ ಉಳಿದಿರುವ ಎಲ್ಲ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಅರಭಾವಿ ಪಟ್ಟಣದಲ್ಲಿ ಸರಕಾರಿ ಜಾಗೆಯಲ್ಲಿ ಅನಧೀಕೃತವಾಗಿ ವಾಸವಿರುವ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ತಹಶೀಲ್ದಾರ ಕಛೇರಿಗೆ ಬರುವ ಸಾರ್ವಜನಿಕರ ದೂರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಣ್ಣಪುಟ್ಟ ಕೆಲಸಗಳಿಗೆ ಸಾರ್ವಜನಿಕರನ್ನು ಅನಾವಶ್ಯಕವಾಗಿ ಅಲೆದಾಡಿಸದಂತೆ ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೋವಿಡ್‍ನಿಂದ ರದ್ದುಗೊಂಡಿರುವ ಗ್ರಾಮೀಣ ಭಾಗದ ಬಸ್ ಸಂಚಾರವನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಸಾರ್ವಜನಿಕ ಹಾಗೂ ಶಾಲಾ ವಿದ್ಯಾರ್ಥಿಗಳ ಸಂಚಾರಕ್ಕೆ ಯಾವುದೇ ಅಡಚಣೆ ಹಾಗೂ ಸಮಸ್ಯೆಗಳು ಉದ್ಭವಿಸದಂತೆ ಬಸ್‍ಗಳನ್ನು ಓಡಿಸುವಂತೆ ಸೂಚನೆ ನೀಡಿದರು.

ಕೌಜಲಗಿ ಹಾಗೂ ಸುತ್ತಲಿನ ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಚ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾಮಗಾರಿಯನ್ನು ತ್ವರೀತವಾಗಿ ಕೈಗೊಳ್ಳುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ವ್ಯಾಕ್ಷಿನ್‍ನಿಂದ ಯಾವುದೇ ಅಡ್ಡ ಪರಿಣಾಮವಿಲ್ಲ : ಮೊದಲ ಹಂತದ ಲಸಿಕೆಯಲ್ಲಿ ಅವಿಭಜಿತ ಗೋಕಾಕ ತಾಲೂಕಿಗೆ 1828 ಲಸಿಕೆಗಳು ಬಂದಿದ್ದು,  ಆದರೆ ಇದನ್ನು ಪಡೆಯಲು ಬಾಕಿ ಉಳಿದವರು ಹಿಂಜರಿಯುತ್ತಿದ್ದಾರೆ. ಯಾವುದಕ್ಕೂ ಹಿಂಜರಿಯಬೇಡಿ. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮಗಳು ಬರುವುದಿಲ್ಲ. ಲಸಿಕೆ ಪಡೆದವರು ಆರೋಗ್ಯದಿಂದ ಸುರಕ್ಷಿತರಾಗಿರುತ್ತಾರೆ. ಕೆಲ ವದಂತಿಗಳು ಹಬ್ಬಿವೆ. ಸುರಕ್ಷತಾ ದೃಷ್ಟಿಯಿಂದ ಮೊದಲು ಕೊರೋನಾ ವಾರಿಯರ್ಸ್‍ಗೆ ಲಸಿಕೆ ಹಾಕಲಾಗುತ್ತಿದೆ. ವ್ಯಾಕ್ಸಿನ್‍ದಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಉದ್ಭವಿಸುವುದಿಲ್ಲವೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಷ್ಟಪಡಿಸಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಸಂಸದ ಈರಣ್ಣ ಕಡಾಡಿ ಅವರಿಂದ ಸಭೆ : ಇದೇ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸಂಸದರ ಆದರ್ಶ ಗ್ರಾಮ ಆಯ್ಕೆ ಮಾಡುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಂಸದರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಆಯ್ಕೆಮಾಡುವ ಒಂದು ಗ್ರಾಮ ಪಂಚಾಯತಿಗೆ ಕೇಂದ್ರ ಪುರಸ್ಕøತ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಒಗ್ಗೂಡಿಸಿ ಅನುಷ್ಠಾನಗೊಳಿಸುವುದರ ಮೂಲಕ ಸಮಗ್ರ ಅಭಿವೃದ್ಧಿಯೊಂದಿಗೆ ಗ್ರಾಮ ಪಂಚಾಯತಿಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡುವುದು ಸಂಸದ್ ಆದರ್ಶ ಗ್ರಾಮ ಯೋಜನೆಯ ಮುಖ್ಯ ಉದ್ಧೇಶವಾಗಿದೆ ಎಂದು ಹೇಳಿದರು.

ಪ್ರಸ್ತುತ ಸಾಲಿನಲ್ಲಿ ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಪ್ರತಿ ವರ್ಷಕ್ಕೊಂದು 5 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸಬೇಕಾಗುತ್ತದೆ. ಈಗಾಗಲೇ ಈ ಯೋಜನೆಯ ಅನುಷ್ಠಾನವನ್ನು ಪ್ರಧಾನಿಗಳು ಖುದ್ದಾಗಿ ಪರಿಶೀಲಿಸುತ್ತಿದ್ದಾರೆ. ಕುಟುಂಬಗಳ ಸಮೀಕ್ಷೆ ಮಾಡಿ ಒಕ್ಕೂಟಗಳನ್ನು ರಚಿಸುವುದು ಗ್ರಾಮ ಅಭಿವೃದ್ಧಿ ಕಮೀಟಿ ರಚನೆ ಮಾಡುವುದು ಪ್ರತಿ ಮನೆ-ಮನೆಗೆ ಶೌಚಾಲಯ ನಿರ್ಮಾಣ, ಸಾಮೂಹಿಕ ಶೌಚಾಲಯ, ಘನ ಮತ್ತು ದ್ರವ ತ್ಯಾಜ್ಯ ಘಟಕ, ಗೊಬ್ಬರ ಗ್ಯಾಸ್, ಕಡ್ಡಾಯವಾಗಿ ಪ್ಲಾಸ್ಟಿಕ್ ಮುಕ್ತ ಮಾಡುವುದು, ಸ್ವ-ಸಹಾಯ ಸಂಘಗಳಿಂದ ಬಟ್ಟೆ, ಚೀಲ, ಮಾಸ್ಕ್, ಇತರೇ ಚಟುವಟಿಕೆಗಳನ್ನು ತಯಾರಿಸುವುದು, ರಸ್ತೆ, ಚರಂಡಿಗಳ ನಿರ್ಮಾಣ ಮತ್ತು ಸ್ವಚ್ಛತೆ, ಗ್ರಂಥಾಲಯ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳ ಬಗ್ಗೆ ಸಂಸದ ಈರಣ್ಣ ಕಡಾಡಿ ಅವರು ಸಭೆಯಲ್ಲಿ ವಿವರಿಸಿರು. 

ಬೆಳಗಾವಿ ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಡಿ.ಎಂ. ಜಕ್ಕಪ್ಪಗೋಳ, ತಹಶೀಲ್ದಾರ ಡಿ.ಜೆ. ಮಹಾತ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ(ಪ್ರ) ಬಸವರಾಜ ಹೆಗ್ಗನಾಯಿಕ, ಸಿಪಿಐ ವೆಂಕಟೇಶ ಮುರನಾಳ, ಬಿಇಓ ಅಜೀತ ಮನ್ನಿಕೇರಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ