ಗೋಕಾಕದಲ್ಲಿ ಬಿಡಿಸಿಸಿ ಬ್ಯಾಂಕ್ ಚುನಾವಣೆ ನಿಮಿತ್ತ ಜಿಲ್ಲೆಯ ಇತರೇ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ: ದೇವರು ಮತ್ತು ಸಹಕಾರ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯುವುದಾಗಿ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಬ್ಯಾಂಕಿನ ಪ್ರಚಾರಾರ್ಥವಾಗಿ ಜಿಲ್ಲೆಯ ಇತರೇ ಸಹಕಾರ ಸಂಘಗಳ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಇತರೇ ಸ್ಥಾನವು ನಮ್ಮ ಗುಂಪಿಗೆ ದೊರಕಲಿದೆ ಎಂದವರು ಹೇಳಿದರು.
ಜಿಲ್ಲೆಯ 853 ಇತರೇ ಸಹಕಾರ ಸಂಘಗಳ ಪೈಕಿ ಸುಮಾರು 577 ಸಹಕಾರ ಸಂಘಗಳ ಸದಸ್ಯರು ಇಂದಿನ ಸಭೆಯಲ್ಲಿ ಹಾಜರಾಗಿ ನಾವು ಕೈಕೊಳ್ಳುವ ನಿರ್ಧಾರಕ್ಕೆ ಬದ್ಧರಿರುವುದಾಗಿ ತಿಳಿಸಿದ್ದಾರೆ. ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಸಂಘಗಳ ಹಿತಕ್ಕಾಗಿ ದುಡಿಯುವ, ಕಷ್ಟಕ್ಕೆ ಮಿಡಿಯುವ ಯೋಗ್ಯ ಅಭ್ಯರ್ಥಿಯನ್ನು ಹಾಕಲಾಗುವುದು. ಜತೆಗೆ ಅವಿರೋಧ ಆಯ್ಕೆಗೆ ಹೆಚ್ಚಿನ ಒಲುವು ತೋರಲಾಗುತ್ತಿದೆ. ಚುನಾವಣೆ ನಡೆಸದೇ ಎಲ್ಲರೂ ಒಪ್ಪುವ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯ ಆರು ವಿವಿಧ ಸಹಕಾರ ಸಂಘಗಳನ್ನು ಕೂಡಿಸಿಕೊಂಡು ಕೇವಲ ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಏಕಪಕ್ಷೀಯ ನಿರ್ಧಾರದಿಂದಾಗಿ ಅಧ್ಯಕ್ಷರೊಂದಿಗೆ ಮನಸ್ತಾಪ ಉಂಟಾಗಿದ್ದರಿಂದ, ಸಹಕಾರ ಸಂಘಗಳ ಬಳಿಗೆ ಹೋಗಿ ಮತ ಯಾಚಿಸುತ್ತಿದ್ದೇವೆ. 6 ಸ್ಥಾನಗಳನ್ನು ಕಡಿಮೆ ಮಾಡಿ ಕೇವಲ ಒಂದೇ ಒಂದು ಸ್ಥಾನವನ್ನು ಮಾಡಿದ್ದರಿಂದ ಆಯಾ ವಿಭಾಗದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.
ಬ್ಯಾಂಕಿನ ಸರ್ವ ಸಾಧಾರಣ ಸಭೆಯಲ್ಲಿ ಶೇಅರುದಾರರ ಅನುಮತಿಯನ್ನು ಪಡೆಯದೇ, ಆಡಳಿತ ಮಂಡಳಿಯವರ ಗಮನಕ್ಕೂ ತರದೇ ಅಧ್ಯಕ್ಷರೊಬ್ಬರೇ ನಿರ್ಧಾರ ಕೈಗೊಂಡರು. ಇದೇ ಕಾರಣಕ್ಕೆ ಅಧ್ಯಕ್ಷರ ವಿರುದ್ಧ ತಿರುಗಿ ಬೀಳಲು ಕಾರಣವಾಯಿತು ಎಂದು ಇದೇ ಮೊದಲ ಬಾರಿಗೆ ಕತ್ತಿಯವರೊಂದಿನ ಮನಸ್ತಾಪವನ್ನು ಬಹಿರಂಗ ಪಡಿಸಿದರು.
ಕುರಿ ಉಣ್ಣೆ ಉತ್ಪಾದಕರು, ಗ್ರಾಹಕರ ಸಹಕಾರ ಸಂಘ, ಔದ್ಯೋಗಿಕ ಸಹಕಾರ ಸಂಘ, ಹಾಲು ಉತ್ಪಾದಕ ಸಹಕಾರ ಸಂಘ, ಅರ್ಬನ್ ಸೊಸೈಟಿ, ಟಿಎಪಿಸಿಎಂಎಸ್ ಗಳನ್ನು ಕೂಡಿಸಿಕೊಂಡು ಇತರೇ ಸಹಕಾರ ಸಂಘದ ಹೆಸರಿನಲ್ಲಿ ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಇದರಿಂದ ಉಳಿದ ಸ್ಪರ್ಧಾಕಾಂಕ್ಷಿಗಳಿಗೆ ತೀವ್ರ ನೋವುಂಟಾಗಿದೆ. ಪಕ್ಕದ ಬಾಗಲಕೋಟೆ ಜಿಲ್ಲೆಯಲ್ಲಿ ಯಾವ ಬದಲಾವಣೆಯೂ ಆಗದೇ ಆರೂ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ನಮ್ಮ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಮಾತ್ರ ಇತರೇ ಸಹಕಾರ ಸಂಘಕ್ಕೆ ಒಂದು ಸ್ಥಾನಕ್ಕೆ ಚುನಾವಣೆ ಜರುಗುತ್ತಿದೆ ಎಂದು ರಮೇಶ ಕತ್ತಿಯವರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.
ಶತಮಾನೋತ್ಸವ ಸಂಭ್ರಮದಲ್ಲಿರುವ ಬಿಡಿಸಿಸಿ ಬ್ಯಾಂಕಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹೊಸ ಆಡಳಿತ ಮಂಡಳಿಯು ಅಧಿಕಾರಕ್ಕೆ ಬರಲಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಉತ್ತಮ ಆಡಳಿತ ನಡೆಸುತ್ತೇವೆ. ಸಹಕಾರ ಸಂಘಗಳ ಆರ್ಥಿಕ ಬಲವರ್ಧನೆಗೆ ಅನೇಕ ಕ್ರಮಗಳನ್ನು ಕೈಗೊಳ್ಳುತ್ತೇವೆ. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಯ ದೊರಕಿಸಿಕೊಡುತ್ತೇವೆ. ಪಾರದರ್ಶಕ ಆಡಳಿತ ನಡೆಸಿ ಈಗಿರುವ ಬ್ಯಾಂಕಿನ ಆರ್ಥಿಕ ಮಟ್ಟವನ್ನು ದ್ವಿಗುಣ ಮಾಡುತ್ತೇವೆ ಎಂದು ತಿಳಿಸಿದರು.
ಅಕ್ಟೋಬರ್ ತಿಂಗಳಲ್ಲಿ ಜರುಗಲಿರುವ ಈ ಚುನಾವಣೆಯನ್ನು 16 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆಲ್ಲುತ್ತೇವೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಮತದಾರರ ಆಶೀರ್ವಾದವು ನಮಗೆ ಶ್ರೀರಕ್ಷೆಯಾಗಿದೆ. ಮೂಡಲಗಿ ಮತ್ತು ಗೋಕಾಕ ತಾಲ್ಲೂಕಿನ ಅಭ್ಯರ್ಥಿಯನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸುತ್ತೇವೆ ಎಂದು ಅವರು ಹೇಳಿದರು.
*ಹಾಲುಮತ ಸಮಾಜಕ್ಕೆ ಪ್ರಾಶಸ್ತ್ಯ*
ಇತ್ತೀಚೆಗೆ ನಮ್ಮ ಕ್ಷೇತ್ರದ ಹಾಲುಮತ ಬಾಂಧವರು ಭೇಟಿ ಮಾಡಿ ಬಿಡಿಸಿಸಿ ಬ್ಯಾಂಕಿನಲ್ಲಿ ಕಳೆದ ಅವಧಿಯಲ್ಲಿ ಹಾಲು ಮತ ಸಮಾಜಕ್ಕೆ ಆದ್ಯತೆ ಸಿಕ್ಕಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಖಂಡಿತವಾಗಿಯೂ ಈ ಸಮಾಜಕ್ಕೆ ಆದ್ಯತೆ ನೀಡುವ ಕೆಲಸ ಮಾಡುತ್ತೇವೆ. ಸಚಿವ ಸತೀಶ್ ಜಾರಕಿಹೊಳಿಯವರೊಂದಿಗೆ ಚರ್ಚಿಸಿ ಹಾಲುಮತ ಸಮಾಜಕ್ಕೆ ನಾಮ ನಿರ್ದೇಶನದ ಮೂಲಕ ಪ್ರಾಶಸ್ತ್ಯ ನೀಡಲಿಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಅವರು ಹಾಲುಮತ ಸಮಾಜದವರಿಗೆ
ಭರವಸೆಯನ್ನು ನೀಡಿದರು. ಜತೆಗೆ ಉಳಿದ ಸಮಾಜಕ್ಕೂ ಅವಕಾಶ ಮಾಡಿಕೊಡುವ ವಾಗ್ದಾನ ಮಾಡಿದರು.
ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬಿಡಿಸಿಸಿ ನಿರ್ದೇಶಕರಾದ ನೀಲಕಂಠ ಕಪ್ಪಲಗುದ್ದಿ, ಪಂಚನಗೌಡ ದ್ಯಾಮನಗೌಡರ, ಕೃಷ್ಣಾ ಅನಗೋಳಕರ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಸದೆಪ್ಪ ವಾರಿ, ರಮೇಶ ಅಣ್ಣಿಗೇರಿ, ಪ್ರಕಾಶ ಅಂಬೋಜಿ, ಶಂಕರ ಇಟ್ನಾಳ, ಬಾಬು ವಾಗ್ಮೂರೆ, ಸದಾಶಿವ ಶಿಂತ್ರೆ, ವೀರುಪಾಕ್ಷಿ ಈಟಿ, ಮಹಾದೇವ ಬಿಳಿಕುರಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಸಹಕಾರ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.