ಮೂಡಲಗಿ- ಇತಿಹಾಸ ಪ್ರಸಿದ್ಧ ಅಂಕಲಗಿ ಅಡವಿ ಸಿದ್ಧೇಶ್ವರ ಮಹಾಸ್ವಾಮಿಗಳು ಇಲ್ಲಿ ಬಂದು ನೆಲೆಸಿರುವ ಇತಿಹಾಸಗಳಿದ್ದು, ಈ ಮಠಕ್ಕೆ ಭವ್ಯವಾದ ಪರಂಪರೆ ಇದೆ. ನಮ್ಮ ಕ್ಷೇತ್ರದ ಭಕ್ತಾಧಿಗಳು ಸೇರಿಕೊಂಡು ಶ್ರೀ ಮಠದ ಅಭಿವೃದ್ಧಿಗೆ ಪಣ ತೊಡೋಣ. ಮಠದ ವಿಷಯದಲ್ಲಿ ಎಲ್ಲರೂ ಒಂದಾಗಿ ಶ್ರೀಕ್ಷೇತ್ರವನ್ನು ಪ್ರಗತಿ ಮಾಡೋಣ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ತಾಲ್ಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ಕಳೆದ ಶನಿವಾರದಂದು ಅಂಬಲಿ ಒಡೆಯ ಎಂದು ಖ್ಯಾತಿ ಪಡೆದಿರುವ ಅಡವಿ ಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವಾಪೂರ (ಹ) ಗ್ರಾಮದಲ್ಲಿರುವ ಅಡವಿ ಸಿದ್ಧೇಶ್ವರ ಮಠದ ಪ್ರಗತಿಯೇ ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.
ಸಮಾಜದ ಸುಧಾರಣೆಯಲ್ಲಿ ಮಠ-ಮಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮಾಜಕ್ಕೆ ಶಾಂತಿ ಸಂದೇಶ ಸಾರಲು ಸಹ ಮಠಗಳ ಪಾತ್ರ ಮುಖ್ಯವಾಗಿವೆ. ಅಂಕಲಗಿಯಂತಹ ದೊಡ್ಡ ಮಠದ ಶಾಖೆಯು ನಮ್ಮ ಕ್ಷೇತ್ರದಲ್ಲಿರುವುದು ಹೆಮ್ಮೆಯಾಗಿದೆ. ಪವಾಡ ಪುರುಷನಾಗಿರುವ ಅಡವಿ ಸಿದ್ಧೇಶ್ವರ ಮಹಾಸ್ವಾಮಿಗಳ ಬದುಕು ಆದರ್ಶಪ್ರಾಯವಾಗಿದೆ. ಇಂತಹ ಪೂಜ್ಯನೀಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ. ಸಮಾಜದ ಬದಲಾವಣೆಗಳಲ್ಲಿಯೂ ಸ್ವಾಮೀಜಿಗಳ ಪಾತ್ರವು ಅಷ್ಟೇ ಮಹತ್ವದ್ದಾಗಿದೆ ಎಂದು ತಿಳಿಸಿದರು.
೧೪೦ ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ಹೆಮ್ಮೆಯ ದೇಶದಲ್ಲಿ ನಾನಾ ಜಾತಿ- ಧರ್ಮಗಳಿದ್ದರೂ ಎಲ್ಲರೂ ಅಣ್ಣ- ತಮ್ಮಂದಿರರಂತೆ ಬದುಕುತ್ತಿದ್ದೇವೆ. ಸಾಮರಸ್ಯ ಬದುಕು ನಮ್ಮದಾಗಿದೆ. ಆದರೆ ನಮ್ಮ ನೆರೆಯ ದೇಶವಾಗಿರುವ ಬಾಂಗ್ಲಾದಲ್ಲಿ ಒಂದೇ ಧರ್ಮ, ಒಂದೇ ಜಾತಿಯಿದ್ದರೂ ಅಲ್ಲಿ ಇವತ್ತು ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಅದಕ್ಕೆ ನಮ್ಮ ಭಾರತವು ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ ಎಂದು ನಮ್ಮ ದೇಶದ ಭವ್ಯ ಇತಿಹಾಸ, ಪರಂಪರೆಯನ್ನು ವಿವರಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಸ್ಥಳೀಯ ಅಡವಿ ಸಿದ್ಧೇಶ್ವರ ಮಠದ ಪೀಠಾಧಿಪತಿ ಅಡವಿ ಸಿದ್ಧರಾಮ ಮಹಾಸ್ವಾಮಿಗಳು, ಹೊಸೂರಿನ ಗಂಗಾಧರ ಮಹಾಸ್ವಾಮಿಗಳು, ಬೈಲಹೊಂಗಲ ಮೂರು ಸಾವಿರ ಮಠದ ನೀಲಕಂಠ ಮಹಾಸ್ವಾಮಿಗಳು, ದೇವರ ಶೀಗಿಹಳ್ಳಿಯ ವೀರೇಶ್ವರ ಮಹಾಸ್ವಾಮಿಗಳು, ಕಂಕಣವಾಡಿಯ ಮಾರುತಿ ಶರಣರು ವಹಿಸಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ವಿವಿಧ ಮಠಗಳ ಪೂಜ್ಯರು ಪುಷ್ಪಾರ್ಪಣೆ ಮಾಡಿ ಸತ್ಕರಿಸಿದರು.
ವೇದಿಕೆಯಲ್ಲಿ ಮುಖಂಡರಾದ ಹಣಮಂತ ತೇರದಾಳ, ಸಂತೋಷ ಸೋನವಾಲಕರ, ಶಿವಬಸು ಜುಂಜರವಾಡ, ಕೆಂಪಣ್ಣ ಮುಧೋಳ, ಲಕ್ಷ್ಮಣ ಕತ್ತಿ, ಸತೀಶ ಜುಂಜರವಾಡ, ಮಲ್ಲಪ್ಪ ಜುಂಜರವಾಡ, ಮಹಾಂತೇಶ ಕುಡಚಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀಮಠದ ಭಕ್ತರಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗಿದ್ದು, ಶ್ರೀಮಠದ ಪೀಠಾಧಿಪತಿಗಳೊಂದಿಗೆ ಮಾತನಾಡಿ ಇಷ್ಟರಲ್ಲೇ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡುತ್ತೇನೆ. ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ಆಗಬಾರದು. ಇದನ್ನು ಯಾರು ಸಹಿಸಲ್ಲ. ಮಠದ ಅಭಿವೃದ್ಧಿಯೊಂದೇ ನಮ್ಮ ಗುರಿಯಾಗಿರಬೇಕು. ಶ್ರೀಮಠದ ಅಭಿವೃದ್ಧಿಗೆ ನನ್ನಿಂದಾಗುವ ಎಲ್ಲ ಸಹಾಯ, ಸಹಕಾರ, ನೆರವನ್ನು ನೀಡಲಿಕ್ಕೆ ಸದಾ ಸಿದ್ಧನಾಗಿರುವೆ, – *ಬಾಲಚಂದ್ರ ಜಾರಕಿಹೊಳಿ* ಶಾಸಕರು ಮತ್ತು ಬೆಮ್ಯುಲ್ ಅಧ್ಯಕ್ಷರು.