ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಮಂಗಳವಾರದಂದು ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ಅರಭಾವಿ ಕ್ಷೇತ್ರದ ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಹುಣಶ್ಯಾಳ ಪಿಜಿ, ವಡೇರಹಟ್ಟಿ ಮತ್ತು ಮುಸಗುಪ್ಪಿ ಗ್ರಾಮಗಳಿಗೆ ಭೇಟಿ ನೀಡಿದರು.
ಅಲ್ಲಿರುವ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಮಳೆಯ ಪ್ರಮಾಣ ಸದ್ಯಕ್ಕೆ ಇಳಿಕೆಯಾಗುತ್ತಿದೆ. ಪ್ರವಾಹದಿಂದ ನದಿ ತೀರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತುಂಬ ತೊಂದರೆಯಾಗುತ್ತಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಉದ್ಭವವಾಗುತ್ತಿದೆ. ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡಲು ನಾವುಗಳು ಸಿದ್ಧರಿದ್ದೇವೆ. ಯಾವುದಕ್ಕೂ ಧೃತಿಗೆಡಬೇಡಿ. ನಿಮ್ಮ ನೋವುಗಳನ್ನು ನಾವು ಪರಿಹರಿಸುತ್ತೇವೆ. ಸರಕಾರದಿಂದ ಸಿಗಬೇಕಿರುವ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಸಂತ್ರಸ್ತರಿಗೆ ಅಗತ್ಯವಿರುವ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಅಲ್ಲಿ ಊಟ, ವಸತಿ ಸೌಕರ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನಿರ್ದೇಶನದ ಹಿನ್ನೆಲೆಯಲ್ಲಿ ಸಂತ್ರಸ್ತರನ್ನು ಖುದ್ದು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತಿರುವುದಾಗಿ ಹೇಳಿದರು.
ಸರ್ವೋತ್ತಮ ಜಾರಕಿಹೊಳಿ ಅವರು ಲೋಳಸೂರ ಸೇತುವೆಯನ್ನು ವೀಕ್ಷಿಸಿದರು. ನಂತರ ವಿವಿಧ ಗ್ರಾಮಗಳಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕರಾದ ದಾಸಪ್ಪ ನಾಯಿಕ, ಸಿ.ಪಿ.ಯಕ್ಸಂಬಿ,
ಆಯಾ ಗ್ರಾಮಗಳ ಪ್ರಮುಖರು, ಉಸ್ತುವಾರಿ ಅಧಿಕಾರಿಗಳು,ಪಿಡಿಓಗಳು, ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.