Breaking News

*ಭಗೀರಥ ಉಪ್ಪಾರ ಸಮಾಜವನ್ನು ಪಜಾ/ ಪ.ಪಂಗಡಕ್ಕೆ ಸೇರಿಸಲು ಸರಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ- ಶಾಸಕ ಬಾಲಚಂದ್ರ ಜಾರಕಿಹೊಳಿ*


*ಗೋಕಾಕದಲ್ಲಿಂದು ಜರುಗಿದ ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ*

*ಗೋಕಾಕ:* ಭಗೀರಥ ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಸರ್ಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

  ನಗರದ ಬೀರೇಶ್ವರ ಸಭಾಭವನದಲ್ಲಿ ಶುಕ್ರವಾರದಂದು ಜರುಗಿದ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಗೀರಥ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

ಭಗೀರಥ ಉಪ್ಪಾರ ಸಮಾಜವನ್ನು ಎಸ್.ಸಿ/ಎಸ್.ಟಿ.ಗೆ ಸೇರ್ಪಡೆ ಮಾಡುವ ಸಂಬಂಧ ಸಮಾಜದವರು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಸಮಾಜ ಬಾಂಧವರ ಹೋರಾಟಗಳಿಗೆ ಸದಾ ಬೆಂಬಲವನ್ನು ನೀಡಿದ್ದೇನೆ. ಈ ಸಮಾಜಕ್ಕೆ ಮೀಸಲಾತಿ ನೀಡಬೇಕೆಂಬುದು ನಮ್ಮೇಲ್ಲರ ಒತ್ತಾಸೆಯಾಗಿದೆ. ಈ ದಿಸೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಪಕ್ಷ ಬೇಧ ಮರೆತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ಭಗೀರಥ ಸಮಾಜದ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿಕೊಳ್ಳಲಾಗುವುದು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಜೊತೆಗೆ ಕುಲಶಾಸ್ತ್ರ ಅಧ್ಯಯನ ವರದಿ ಆಧಾರದ ಮೇಲೆ ಮೀಸಲಾತಿಯನ್ನು ನೀಡುವುದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಮುಂದಿನ 2024ರಲ್ಲಿಯೂ ಮತ್ತೇ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕೇಂದ್ರ ಮಟ್ಟದಲ್ಲಿ ಸಮಾಜಕ್ಕೆ ಸಿಗಬೇಕಿರುವ ಮೀಸಲಾತಿಯನ್ನು ಪಡೆಯುವದರ ಸಂಬಂಧ ಇಡೀ ಸಮಾಜ ಬಾಂಧವರ ಜೊತೆಗೂಡಿ ಪ್ರಯತ್ನಿಸುವುದಾಗಿ ಅವರು ಹೇಳಿದರು.

ಭಗೀರಥ ಸಮಾಜವು ಆರ್ಥಿಕವಾಗಿ ಮುಂದೆ ಬರಬೇಕಿದೆ. ಶಿಕ್ಷಣದಲ್ಲಿ ಮಹತ್ತರ ಸಾಧನೆ ಮಾಡಬೇಕಿದೆ. ಡಾ: ಅಂಬೇಡ್ಕರ ಅವರು ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟಗಳನ್ನು ಮಾಡುವುದರ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಈ ದಿಸೆಯಲ್ಲಿ ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಮಾಜವು ಗಟ್ಟಿಯಾಗಿ ನಿಂತು ಸಂಘಟಿತರಾದರೆ ಮಾತ್ರ ಸರ್ಕಾರದ ಯೋಜನೆಗಳು ಪಡೆಯಬಹುದು. ಒಗ್ಗಟ್ಟಾದರೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿದೆ. ಸಮಾಜವನ್ನು ಒಡೆಯದೇ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ನಿಂತು ಸಮಾಜಕ್ಕೆ ಪೂರಕವಾಗುವ ಕೆಲಸವನ್ನು ಮಾಡುವಂತೆ ಅವರು ತಿಳಿಸಿದರು.

ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿನಲ್ಲಿ ಭಗೀರಥ ಉಪ್ಪಾರ ಸಮಾಜದವರು ಮಹತ್ತರ ಪಾತ್ರ ವಹಿಸಿದ್ದಾರೆ.ಸದಾ ನನ್ನ ಬೆನ್ನಿಗೆ ನಿಂತಿದ್ದಾರೆ.ಈ ಸಮಾಜಕ್ಕೆ ಸದಾ ಚಿರ ಋಣಿಯಾಗಿರುವೆ. ಮುಂದಿನ ದಿನಗಳಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಎಲ್ಲ ಸಮಾಜ ಬಾಂಧವರನ್ನು ಒಂದೂಗೂಡಿಸಿ ಅದ್ದೂರಿಯಾಗಿ ಮಹರ್ಷಿ ಭಗೀರಥ ಜಯಂತಿಯನ್ನು ಆಚರಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೊಸದುರ್ಗದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಭಗೀರಥ ಉಪ್ಪಾರ ಸಮಾಜಕ್ಕೆ ಭವ್ಯ ಇತಿಹಾಸವಿದೆ. ಹುಟ್ಟು ಶ್ರೀಮಂತ ಜಾತಿಯಾಗಿದ್ದರೂ ಕಾಲ ಕ್ರಮೇಣ ಹಿಂದುಳಿದ ಜಾತಿಗೆ ಸೇರಬೇಕಾಯಿತು. ದೇಶದಾದ್ಯಂತ 15-20ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪ.ಜಾ/ಪ.ಪಂ ಸೇರಿಸಬೇಕಾಗಿದೆ. ಸಾಕಷ್ಟು ಬಾರಿ ಈ ಹಿಂದಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದೆ. ಆದರೂ ನಮ್ಮ ಸಮಾಜವನ್ನು ಸರ್ಕಾರಗಳು ಕಡೆಗೆಣಿಸುತ್ತಾ ಬಂದಿವೆ. ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗಗಳು ಉಪ್ಪಾರ ಸಮಾಜವನ್ನು ಎಸ್.ಸಿ/ಎಸ್.ಟಿಗೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ವರದಿಗಳನ್ನು ಒಪ್ಪಿಸಿವೆ. ಆದ್ದರಿಂದ ಸರ್ಕಾರ ನಮ್ಮ ಸಮಾಜಕ್ಕೆ ಅಗತ್ಯವಿರುವ ಮೀಸಲಾತಿಯನ್ನು ನೀಡಿ ಬಾಂಧವರ ಬೇಡಿಕೆಗಳಿಗೆ ಸ್ಪಂದಿಸುವಂತೆ ಅವರು ಮನವಿ ಮಾಡಿಕೊಂಡರು.

ವೇದಿಕೆಯಲ್ಲಿ ಹಿರಿಯ ನ್ಯಾಯವಾದಿಗಳಾದ ಬಿ.ಆರ್.ಕೊಪ್ಪ, ಎಸ್.ಎಂ.ಹತ್ತಿಕಟಗಿ, ಸಮಾಜದ ಮುಖಂಡರಾದ ಶಿವಪುತ್ರಪ್ಪ ಜಕಬಾಳ, ಬಿ.ಬಿ.ಹಂದಿಗುಂದ,ಶಾಮಾನಂದ ಪೂಜೇರಿ, ಅಡಿವೆಪ್ಪ ಕಿತ್ತೂರ, ಶಂಕರ ಬಿಲಕುಂದಿ, ರಾಮಣ್ಣಾ ಹಂದಿಗುಂದ, ವಿಠ್ಠಲ ಸವದತ್ತಿ, ಮುತ್ತೇಪ್ಪ ಕುಳ್ಳೂರ, ಪರಸಪ್ಪ ಬಬಲಿ, ಮಾಯಪ್ಪ ತಹಶೀಲದಾರ, ಭರಮಪ್ಪ ಉಪ್ಪಾರ, ಕುಶಾಲ ಗುಡೆನ್ನವರ, ಪರಸಪ್ಪ ಚೂನನ್ನವರ, ವಿಠ್ಠಲ ಮೆಳವಂಕಿ ಸದಾಶಿವ ಗುದಗಗೋಳ, ರೇವಪ್ಪ ದುರದುಂಡಿ, ಗಂಗಾಧರ ಭಟ್ಟಿ, ಕವಿತಾ ರಾಜೇಶ್, ಡಾ: ಮಹಾಂತೇಶ ಕಡಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ