ಯರಗಟ್ಟಿ: ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವು ಹೈನುಗಾರ ರೈತರಿಂದ ಸುಮಾರು 5 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಕೆಎಂಎಫ್ ನಿರ್ದೇಶಕರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಯರಗಟ್ಟಿಯ ಹೊರವಲಯದಲ್ಲಿ ಖಾಸಗಿ ಹೊಟೇಲ್ ನಲ್ಲಿ ರಾಜ್ಯ ಸಹಕಾರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಯೂನಿಯನ್ ಇವುಗಳ ಆಶ್ರಯದಲ್ಲಿ ಶುಕ್ರವಾರದಂದು ಜರುಗಿದ ಬೈಲಹೊಂಗಲ ಉಪವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವತೋಮುಖ ಬೆಳವಣಿಗೆಗೆ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಹಾಲು ಒಕ್ಕೂಟವು ಸಹಕಾರ ವಲಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರನ್ನು ಹೊರತು ಪಡಿಸಿದರೆ ಹಾಲು ಸಂಗ್ರಹಣೆಯಲ್ಲಿ ಅಗ್ರಸ್ಥಾನದಲ್ಲಿದೆ. ದಿನಂಪ್ರತಿ ಒಂದೂವರೆಯಿಂದ ಎರಡು ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ. ಹೈನುಗಾರ ರೈತರಿಂದ ಉತ್ತಮ ಗುಣಮಟ್ಟದ ಹಾಲನ್ನು ಸಂಗ್ರಹಿಸಿ ಜಿಲ್ಲಾ ಹಾಲು ಒಕ್ಕೂಟವು ಕೆಲಸ ಮಾಡುತ್ತಿದೆ. ರೈತರು ಸಹ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಕೇವಲ ವಾಣಿಜ್ಯ ಬೆಳೆಗಳನ್ನು ಅವಲಂಬಿಸದೇ ಹೈನುಗಾರಿಕೆಗೆ ಮೊದಲ ಪ್ರಾಶಸ್ತ್ಯ ನೀಡುವ ಮೂಲಕ ಹೈನುಗಾರಿಕೆಯನ್ನು ಉತ್ತೇಜಿಸುವ ಕೆಲಸ ನಡೆಯಬೇಕಾಗಿದೆ. ನಮ್ಮ ಭಾಗದ ರೈತರು ಕೇವಲ ಕಬ್ಬು ಬೆಳೆಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಿದ್ದಾರೆ. ರೈತರು ಆರ್ಥಿಕ ಸ್ಥಿತಿವಂತರಾಗಬೇಕಾದರೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕಾಗಿದೆ ಎಂದು ಅವರು ಹೇಳಿದರು.
ನಾನು ಕೆಎಂಎಫ್ ಅಧ್ಯಕ್ಷನಾದಾಗ ಹಲವಾರು ರೈತ ಪರ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ರಾಸುಗಳು ಮೃತಪಟ್ಟರೆ ಅದಕ್ಕೆ 50ಸಾವಿರ ರೂಪಾಯಿ ವಿಮಾ ಸೌಲಭ್ಯವನ್ನು ಜಾರಿ ಮಾಡಲಾಗಿದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಜಾಗತೀಕವಾಗಿ ವಿಸ್ತರಿಸಲಾಗಿದೆ. ಈ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನು ಮಾಡುತ್ತಿದ್ದೇವೆ. ಗುಣಮಟ್ಟದಲ್ಲಿ ಯಾವುದೇ ರಾಜೀಯಿಲ್ಲಾ. ನಮ್ಮ ನಂದಿನಿಗೆ ದೇಶದಾದ್ಯಂತ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಹೈನುಗಾರಿಕೆಯನ್ನು ಶಕ್ತಿಶಾಲಿಯಾಗಿ ಬೆಳೆಸಲು ನಾವು ರೈತರೊಂದಿಗೆ ನಮ್ಮ ಸಂಸ್ಥೆಯು ಸಹ ಕೈಜೋಡಿಸುತ್ತದೆ. ರೈತರ ಏಳ್ಗೆಯೇ ನಮ್ಮ ಕೆಎಂಎಫ್ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಅಧ್ಯಕ್ಷತೆಯನ್ನು ಸವದತ್ತಿ ಶಾಸಕ ವಿಶ್ವಾಸ ವೈದ್ಯ ವಹಿಸಿದ್ದರು. ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಮತ್ತು ಮಾಜಿ ವಿಪ ಸದಸ್ಯ ವಿವೇಕರಾವ್ ಪಾಟೀಲ ಅವರು ನೆನಪಿನ ಕಾಣಿಕೆಯನ್ನು ವಿತರಿಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಹಕಾರ ಮಂಡಳ ಉಪಾಧ್ಯಕ್ಷ ಜಗದೀಶ ಕವಟಗಿಮಠ, ನಿರ್ದೇಶಕರಾದ ಬಸವರಾಜ ಅರಬಗೊಂಡ, ಗದಿಗೆಪ್ಪಗೌಡ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ಬಾಪುಗೌಡ ಪಾಟೀಲ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ನಿರ್ದೇಶಕ ಈಶ್ವರಚಂದ್ರ ಇಂಗಳಗಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಬಾಬು ಕಟ್ಟಿ, ಸೋಮಲಿಂಗಪ್ಪ ಮುಗಳಿ, ಮಲ್ಲಪ್ಪ ಪಾಟೀಲ ಸೇರಿದಂತೆ ಸಹಕಾರ ವಲಯದ ವಿವಿಧ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.