*ಬೆಳಗಾವಿ :* ಅಗ್ನಿಶಾಮಕ ಠಾಣೆಗಳ ಪ್ರಾರಂಭಕ್ಕೆ ಈಗಾಗಲೇ ಬಹಳಷ್ಟು ಬೇಡಿಕೆಗಳು ಬಂದಿದ್ದು, ಇದಕ್ಕಾಗಿ ಕೆಲವು ಮಾನದಂಡಗಳನ್ನು ವಿಧಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮಾತುಕತೆ ನಡೆಸಿ ಮೂಡಲಗಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಡಾ|| ಜಿ. ಪರಮೇಶ್ವರ್ ಹೇಳಿದರು.
ಮಂಗಳವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾನದಂಡಗಳ ಆಧಾರ ಮೇಲೆ ಮೂಡಲಗಿಯಲ್ಲಿ ಅಗ್ನಿಶಾಮಕ ಠಾಣೆಯನ್ನು ಪ್ರಾರಂಭಿಸಲಿಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಮೂಡಲಗಿ ಹೊಸ ತಾಲೂಕಾಗಿ ೬ ವರ್ಷ ಗತಿಸಿದೆ. ಇದುವರೆಗೂ ಅಗ್ನಿಶಾಮಕ ಠಾಣೆಯನ್ನು ಪ್ರಾರಂಭಿಸಿಲ್ಲ. ಅಭಿವೃದ್ದಿ ಹೊಂದುತ್ತಿರುವ ಮೂಡಲಗಿಯಂತಹ ವಾಣಿಜ್ಯ ಪಟ್ಟಣದಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಾಣಕ್ಕೆ ೧.೨೦ ಎಕರೆ ನಿವೇಶನವನ್ನು ನೀಡಲಾಗಿದೆ. ಆದರೂ ಸರ್ಕಾರ ಇದುವರೆಗೂ ಠಾಣೆಯನ್ನು ಆರಂಭಿಸಿಲ್ಲ ಇದರಿಂದ ಅಗ್ನಿ- ಅವಘಡದಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತುಂಬಾ ಹಾನಿಯಾಗುತ್ತಿದೆ. ಎರಡು ದೊಡ್ಡ ವಾಣಿಜ್ಯ ಅಂಗಡಿಗಳು ಬೆಂಕಿಗೆ ಆಹುತಿಯಾಗಿ ಕೋಟ್ಯಾಂತರ ರೂಗಳು ಆಸ್ತಿ ಹಾನಿಯಾಗಿದೆ. ಗೋಕಾಕದಿಂದ ಮೂಡಲಗಿಯು ೩೦ ಕಿ.ಮೀ ಅಂತರವಿದೆ. ಇದರಿಂದ ಬೆಂಕಿಗೆ ಆಹುತಿಯಾದರೇ ಅಗ್ನಿಶಾಮಕ ಠಾಣೆಯ ಬೆಂಕಿ ನಂದಿಸುವ ವಾಹನಗಳು ಘಟನಾ ಸ್ಥಳಕ್ಕೆ ಬರುವುದು ವಿಳಂಬವಾಗುತ್ತಿದೆ. ಆದ್ದರಿಂದ ಈ ಬಜೆಟ್‌ನಲ್ಲಿ ಸಾಧ್ಯವಾಗದಿದ್ದರೂ ಮುಂದಿನ ಬಜೆಟ್‌ನಲ್ಲಿ ಮೂಡಲಗಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಅನುದಾನವನ್ನು ಮೀಸಲಿಡುವಂತೆ ಬಾಲಚಂದ್ರ ಜಾರಕಿಹೊಳಿ ಅವರು ಗೃಹ ಸಚಿವರನ್ನು ಆಗ್ರಹಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಮ್ಮ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಈ ಅಧಿವೇಶನದಲ್ಲಿ ಪರಿಹಾರ ನೀಡಬೇಕು. ಅಂದಾಗ ಮಾತ್ರ ನಮ್ಮ ಸಮಸ್ಯೆಗಳು ಬಗೆ ಹರಿಯುತ್ತವೆ. ನಮ್ಮ ಕ್ಷೇತ್ರದ ಹಲವು ಕಾಮಗಾರಿಗಳು ಸಹ ಪ್ರಸ್ತಾವಣೆ ಸಲ್ಲಿಕೆಯಾಗಿವೆ. ನಮ್ಮ ಬಿಜೆಪಿ ಸರ್ಕಾರವಿದ್ದಾಗ ಮಂಜೂರಾದ ಕಾಮಗಾರಿಗಳಿಗಾಗಿ ಸರ್ಕಾರ ಇದುವರೆಗೂ ಅನುದಾನವನ್ನು ನೀಡಿಲ್ಲ. ಮೂಡಲಗಿ ಮಿನಿ ವಿಧಾನಸೌಧ ನಿರ್ಮಾಣ, ಕುಲಗೋಡ ಮತ್ತು ಯಾದವಾಡ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆರಿಸುವ ಪ್ರಸ್ತಾವಣೆಗಳು ಸಹ ಸರ್ಕಾರದ ಹಂತದಲ್ಲಿವೆ. ಈ ನಿಟ್ಟಿನಲ್ಲಿ ಸರ್ಕಾರವು ಕೂಡಲೇ ಸ್ಪಂದಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು.
ಗೃಹ ಸಚಿವ ಡಾ|| ಜಿ. ಪರಮೇಶ್ವರ್ ಅವರು ಮೂಡಲಗಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಿವೇಶನವನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಸದ್ಯ ನಿಯಮಗಳ ಅನುಸಾರ ಗ್ರಾಮೀಣ ಪ್ರದೇಶಗಳಲ್ಲಿ ೫೦ ಚದರ ಕಿ.ಮೀ ಮತ್ತು ನಗರ ಪ್ರದೇಶಗಳಲ್ಲಿ ೧೦ ಚದರ ಕಿ.ಮೀಗೆ ಒಂದು ಅಗ್ನಿಶಾಮಕ ಠಾಣೆಗಳು ಕರ್ತವ್ಯ ನಿರ್ವಹಿಸುತ್ತಿವೆ. ಅಗ್ನಿ ಕರೆಗಳನ್ನು ಆದರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ ವಾರ್ಷಿಕವಾಗಿ ಸರಾಸರಿ ೮ರಿಂದ ೧೦ ಅಗ್ನಿ ಕರೆಗಳು ಸ್ವೀಕೃತವಾಗುತ್ತಿವೆ. ಇಷ್ಟೆಲ್ಲಾ ಮಾನದಂಡಗಳು ಇರುವುದರಿಂದ ಮೂಡಲಗಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ನೀಡಲಿಕ್ಕೆ ಆಗುವದಿಲ್ಲ, ಮುಖ್ಯಮಂತ್ರಿ ಗಳೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ. ಮೂಡಲಗಿ ಅಗ್ನಿಶಾಮಕ ಠಾಣೆ ವಿಶೇಷ ಪ್ರಕರಣವೆಂದು ಘೋಷಿಸಿ ಮುಂದಿನ ಬಜೆಟ್‌ನಲ್ಲಿ ಠಾಣೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದೆಂದು ಶಾಸಕ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಚುಕ್ಕಿ ಗುರುತಿನ ಪ್ರಶ್ನೆಗೆ ಗೃಹ ಸಚಿವ ಡಾ|| ಜಿ.ಪರಮೇಶ್ವರ್ ಉತ್ತರಿಸಿದರು.