ಅರಭಾವಿ : ‘2017 ರಲ್ಲಿ ಜಿಟಿಟಿಸಿ ಕೇಂದ್ರ ಸ್ಥಾಪನೆಯಾಗಲು ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಕಾರಣರಾಗಿದ್ದಾರೆ. ಅವರಿಬ್ಬರಿಗೂ ಮುಕ್ತ ಹೃದಯದಿಂದ ಅಭಿನಂದಿಸುವುದಾಗಿ’ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಅರಭಾವಿ ಪಟ್ಟಣದ ನಾಡ ಕಛೇರಿ ಹತ್ತಿರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ 28 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸರಕಾರಿ ಉಪಕರಣಾಗಾರ ಮತ್ತು ಪರಿಣಿತಿ ಕೇಂದ್ರದ ಸಂಕೀರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಶಿಕ್ಷಣದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯವಾಗಿದೆ. ಉತ್ತಮ ಸಮಾಜ ನಿರ್ಮಾಣವಾಗಲು ಶಿಕ್ಷಣ ಅಗತ್ಯವಾಗಿದೆ. ಜಿಟಿಟಿಸಿಯಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ನೌಕರಿ ಖಚಿತವಾಗಿದೆ. ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ ಅವರನ್ನು ಭವಿಷ್ಯದ ಭಾವಿ ಪ್ರಜೆಯನ್ನಾಗಿ ಮಾಡುವ ಜವಾಬ್ದಾರಿ ಪಾಲಕರದ್ದಾಗಿದೆ. ಅರಭಾವಿ ಕ್ಷೇತ್ರವನ್ನು ವಿದ್ಯಾಕಾಶಿಯನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ’ ಎಂದು ಹೇಳಿದರು.
‘ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲ ವರ್ಗಗಳ ಹಿತ ರಕ್ಷಣೆಗೆ ಬದ್ಧವಿದೆ. ಈ ದಿಸೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಬಿಜೆಪಿಯೊಂದೇ ರಾಜ್ಯದಲ್ಲಿ ಸಮರ್ಥ ಆಡಳಿತ ನೀಡಲು ಬದ್ಧವಿದೆ’ ಎಂದರು.
’10 ಎಕರೆ ನಿವೇಶನದಲ್ಲಿ 28 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಅರಭಾವಿಯಲ್ಲಿ 20 ಕೋಟಿ ರೂ. ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ ವಸತಿ ಶಾಲೆಯ ಕಟ್ಟಡ ನಿರ್ಮಾಣವಾಗಲಿದೆ. ಆರ್ ಟಿಓ ಕಛೇರಿಯೂ ಕೂಡ ಇಲ್ಲಿ ಪ್ರಾರಂಭವಾಗಲಿದೆ. ಇದಕ್ಕಾಗಿ ನಿವೇಶನವನ್ನು ಸಹ ನೀಡಲಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಡಾ. ಅಶ್ವತ್ಥ್ ನಾರಾಯಣ , ಬೆಂಗಳೂರು ಜಿಟಿಟಿಸಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಎಚ್. ರಾಘವೇಂದ್ರ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾಧಿಕಾರಿ ಡಾ.ಎಂ.ಜಿ. ಹಿರೇಮಠ, ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಪದ್ಮಶಾಲಿ, ವಲಯ ಅಧಿಕಾರಿ ಬಿ.ಜಿ. ಮೊಗೇರ, ಬೆಳಗಾವಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ರಜಿಸ್ಟ್ರಾರ್ ಚಂದ್ರಮೌಳಿ, ಗೋವಿಂದ ವತ್ಸ, ತಹಶೀಲ್ದಾಗ ಡಿ.ಜೆ. ಮಹಾತ, ಪಟ್ಟಣ ಪಂಚಾಯತ ಅಧ್ಯಕ್ಷ ಲಕ್ಷ್ಮಣ ನಿಂಗನ್ನವರ, ಪ್ರಾಂಶುಪಾಲ ಉಮೇಶ ಬಡಕುಂದ್ರಿ ಇತರರು ಇದ್ದರು.