ಮೂಡಲಗಿ: ತಾಲೂಕಿನ ಕುಲಗೋಡ ಮತ್ತು ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಕಳೆದ ಗುರುವಾರದಂದು ತಾಲೂಕಿನ ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಕುಲಗೋಡ ಮತ್ತು ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮಾರ್ಪಾಡಾಗಲಿವೆ ಎಂದು ಹೇಳಿದರು.
ಕುಲಗೋಡ ಮತ್ತು ಯಾದವಾಡ ಗ್ರಾಮಗಳು ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಸ್ಥಳಗಳಾಗಿರುವುದರಿಂದ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ದೃಷ್ಟಿಯಿಂದ ಇವರೆಡನ್ನು ಮೇಲ್ದರ್ಜೆಗೇರಿಸಲು ಈಗಾಗಲೇ ಪತ್ರಗಳನ್ನು ಬರೆಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ವೈದ್ಯರು ಕಡ್ಡಾಯವಾಗಿ ಆಯಾ ವಸತಿ ಗೃಹಗಳಲ್ಲಿ ವಾಸವಿದ್ದು ರೋಗಿಗಳ ಚಿಕಿತ್ಸೆಯನ್ನು ನಡೆಸಬೇಕು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಅಗತ್ಯವಿರುವ 12 ಹಾಸಿಗೆಗಳನ್ನು ಇಷ್ಟರಲ್ಲಿಯೇ ನೀಡುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಒಳ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕುಲಗೋಡಕ್ಕೆ ನಾಡ ಕಛೇರಿ ಮಂಜೂರು ಮಾಡಿಸುವ ಸಂಬಂಧ ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ಸಲ್ಲಿಸುತ್ತ ಬರುತ್ತಿದ್ದಾರೆ. ಮೂಡಲಗಿ ತಾಲೂಕಿಗೆ ಹೊಂದಿಕೊಂಡಿರುವ ಕುಲಗೋಡ ಗ್ರಾಮಸ್ಥರು ದೂರದ ಅರಭಾವಿಗೆ ತಮ್ಮ ಕೆಲಸ ಕಾರ್ಯಗಳಿಗೆ ತೆರಳಬೇಕಿದೆ. ಹೀಗಾಗಿ ಕುಲಗೋಡ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಅನುಕೂಲಕ್ಕಾಗಿ ಕುಲಗೋಡದಲ್ಲಿ ನಾಡ ಕಛೇರಿಯನ್ನು ಪ್ರಾರಂಭಿಸುವ ಇಂಗಿತವನ್ನು ಶಾಸಕರು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಶಿಥಿಲಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವನ್ನೂ ಸಹ ನಿರ್ಮಿಸುವುದಾಗಿ ಹೇಳಿದರು.
ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಗ್ರಾಮ ಪಂಚಾಯತ ಅಧ್ಯಕ್ಷ ತಮ್ಮಣ್ಣ ದೇವರ, ತಾಪಂ ಮಾಜಿ ಸದಸ್ಯ ಸುಭಾಸ ವಂಟಗೋಡಿ, ಸತೀಶ ವಂಟಗೋಡಿ, ರಾಜು ಕೊಪ್ಪದ, ಪ್ರಾಥಮಿಕ ಆರೋಗ್ಯ ಕೇಂದ್ರ ಆಯುಷ್ ವೈದ್ಯಾಧಿಕಾರಿ ಡಾ. ಮಹೇಶ ಕಂಕಣವಾಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.