ಗೋಕಾಕ-* ದೇಶಾದ್ಯಂತ ಸಂಗ್ರಹಿಸಿರುವ ಮಣ್ಣಿನಿಂದ ಅಮೃತ ಉದ್ಯಾನವನ್ನು ರಚಿಸಲಾಗಿದ್ದು, ಅದು ಏಕ ಭಾರತ- ಶ್ರೇಷ್ಠ ಭಾರತ ದೃಷ್ಟಿಯನ್ನು ಸಾಕಾರಗೊಳಿಸುತ್ತದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿಯ ಎನ್ ಎಸ್ ಎಫ್ ಕಚೇರಿಯಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ಬರುವ ಮಂಗಳವಾರದಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅರಭಾವಿಯಿಂದ ಭಾಗವಹಿಸಲಿರುವ ಕಾರ್ಯಕರ್ತರಿಗೆ ಅಮೃತ ಕಳಶವನ್ನು ದೆಹಲಿಗೆ ಬೀಳ್ಕೊಟ್ಟು ಶುಭ ಕೋರಿದ ಅವರು, ಈ ಮೂಲಕ ನಮ್ಮ ಹೆಮ್ಮೆಯ ವೀರ ಯೋಧರಿಗೆ ಗೌರವ ಸಮರ್ಪಣೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಿಯವರ ಮುಂದಾಲೋಚನೆಯ ನನ್ನ ಮಣ್ಣು, ನನ್ನ ದೇಶ ಅಭಿಯಾನವು ನಮ್ಮ ದೇಶದ ಏಕತೆ ಹಾಗೂ ಸಮಗ್ರತೆಯ ಭಾವನೆಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಲಿದೆ ಎಂದು ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿಯು ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮೋದಿ ಅವರಂತಹ ದಿಟ್ಟ ಶೈಲಿಯ ಪ್ರಧಾನಿಗಳು ನಮ್ಮ ದೇಶಕ್ಕೆ ಅವಶ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಡಿ.ಪಾಟೀಲ, ಪ್ರಭಾ ಶುಗರ್ಸ ನಿರ್ದೇಶಕ ಸಿದ್ಧಲಿಂಗ ಕಂಬಳಿ, ಮುತ್ತೆನಗೌಡ ಪಾಟೀಲ,ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.