Breaking News

*ಮಹಿಳಾ ಮೀಸಲಾತಿಯಿಂದ ಮಹಿಳೆಯರದ್ದೇ ಪಾರುಪತ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ*


ಯಾದವಾಡದಲ್ಲಿ ಎನ್‍ಆರ್‍ಎಂಎಲ್ ಯೋಜನೆಯಡಿ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

    *ಮೂಡಲಗಿ* : ಈಗಾಗಲೇ ಮಹಿಳಾ ಮೀಸಲಾತಿಯು ಜಾರಿಯಾಗಿರುವುದರಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ 33 ರಷ್ಟು ಮಹಿಳಾ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ದೊರೆತಂತಾಗಿದೆ. ಮುಂದಿನ ವರ್ಷಗಳಲ್ಲಿ ಪುರುಷರಂತೆ ಮಹಿಳೆಯರು ಕೂಡ ರಾಜಕೀಯ ಸ್ಥಾನಮಾನ ಪಡೆಯಲಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ತಾಲೂಕಿನ ಯಾದವಾಡ ಗ್ರಾಮದಲ್ಲಿ ಎನ್‍ಆರ್‍ಎಂಎಲ್ ಯೋಜನೆಯಡಿ 18 ಲಕ್ಷ ರೂ. ವೆಚ್ಚದ ಮಹಿಳಾ ಸಂಘಗಳ ಚಟುವಟಿಕೆಗಳಿಗಾಗಿ ನಿರ್ಮಾಣವಾಗಲಿರುವ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಧೇಯಕವನ್ನು ಜಾರಿಗೊಳಿಸಿರುವ ಕೇಂದ್ರದ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಹೇಳಿದರು.

    ಲೋಕಸಭೆ ಹಾಗೂ ರಾಜ್ಯ ಶಾಸಕಾಂಗಗಳಲ್ಲೂ ಶೇ 33 ರಷ್ಟು ಖಾತ್ರಿಪಡಿಸುವ ಮಹಿಳಾ ಮೀಸಲಾತಿ ಮಸೂದೆಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರವು ಅಂಗೀಕರಿಸಿದೆ. 2029 ರ ಬಳಿಕ ಈ ಹೊಸ ಮಸೂದೆ ಅನುಷ್ಠಾನಗೊಳ್ಳಲಿದ್ದು, ಇದರಿಂದ ಲೋಕಸಭೆಯಲ್ಲಿ 178 ಮಹಿಳಾ ಸಂಸದರು ಮತ್ತು ರಾಜ್ಯದಲ್ಲಿ 74 ಮಹಿಳಾ ಶಾಸಕಿಯರು ಆಯ್ಕೆಯಾಗುವ ಭಾಗ್ಯ ಮಹಿಳೆಯರದ್ದಾಗಿದೆ. ಮಹಿಳೆಯರು ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರ ಬದ್ಧವಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ನಾಯಕತ್ವದಿಂದ ಮಹಿಳೆಯರ ಅಭಿವೃದ್ಧಿಗೆ ನೂರಾರು ಕಲ್ಯಾಣ ಕಾರ್ಯಕ್ರಮಗಳು ಜಾರಿಯಾಗಿವೆ. ಆದಷ್ಟು ಬೇಗನೆ ಶೇ 33 ರಷ್ಟು ಮಹಿಳಾ ಮೀಸಲಾತಿ ಜಾರಿಯಾದರೆ ಮಹಿಳೆಯರಿಗೆ ಹೆಚ್ಚೆಚ್ಚು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

    ನಮ್ಮಂತೆ ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆ ಬರಬೇಕು. ಅವರಿಗೂ ಸಾಕಷ್ಟು ಆಸೆ-ಆಕಾಂಕ್ಷೆಗಳು ಇದ್ದೇ ಇರುತ್ತವೆ. ಶಾಸಕರಾಗಬೇಕು. ಸಂಸದರಾಗಬೇಕು. ಸಚಿವರಾಗಬೇಕೆಂಬ ಮಹತ್ವಾಕಾಂಕ್ಷೆಗಳು ನಮ್ಮ ಸಹೋದರಿಯರಿಗೆ ಇದ್ದೇ ಇರುತ್ತದೆ. ಈ ಪರಿಕಲ್ಪನೆಯನ್ನು ಮನಗಂಡು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸಿದೆ. ಈ ಮೂಲಕ ಮಹಿಳೆಯರಿಗೆ ನಮ್ಮ ಸರ್ಕಾರ ಗೌರವ ಅರ್ಪಿಸಿದೆ ಎಂದು ಅವರು ಹೇಳಿದರು.

    ಮಹಿಳಾ ಸ್ವ-ಸಹಾಯ ಗುಂಪುಗಳ ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರ್ಕಾರವು ನ್ಯಾಷನಲ್ ರೂರಲ್ ಲೈವ್ಲಿವುಡ್ ಮಿಷನ್ (ಎನ್‍ಆರ್‍ಎಂಎಲ್) ಆಜೀವಿಕ ಯೋಜನೆಯನ್ನು ಜಾರಿಗೊಳಿಸಿದ್ದು, ಮಹಿಳಾ ಸಂಘಗಳು ಇದರ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ಸರ್ಕಾರವು ಸಂಜೀವಿನಿ ಹೆಸರಿನಲ್ಲಿ ಸ್ವ-ಸಹಾಯ ಗುಂಪುಗಳ ಪುನಶ್ಚೇತನಕ್ಕೆ ಮುಂದಾಗಿ ಈ ಯೋಜನೆಯ ನಿಧಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 75:25 ಅನುಪಾತದಲ್ಲಿ ಪ್ರತಿ ಸ್ವ-ಸಹಾಯ ಗುಂಪುಗಳಿಗೆ ಸಾಲ ನೀಡುತ್ತಿವೆ ಎಂದು ಹೇಳಿದರು.

   ಯಾದವಾಡ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಈಗಾಗಲೇ ಅನುಷ್ಠಾನ ಮಾಡಲಾಗಿದೆ. ಗ್ರಾಮಾಭಿವೃದ್ಧಿಗೆ ಪಂಚಾಯತ ಸದಸ್ಯರು ಹಾಗೂ ಹಿರಿಯರು ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ಗ್ರಾಮವನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ಮಾಡಿದ ಅವರು, ಗ್ರಾಮದ ಬೀರಪ್ಪ ದೇವರ ದೇವಸ್ಥಾನದ ಸಮುದಾಯ ಭವನ ಮತ್ತು ಬೆಳಗಲಿ ಬಸಪ್ಪಜ್ಜನ ಸಮುದಾಯ ಭವನಗಳಿಗೆ ಆರ್ಥಿಕ ನೆರವು ಕಲ್ಪಿಸಿಕೊಡುವ ವಾಗ್ದಾನ ಮಾಡಿದರು. ಶಾಲಾ ಮಕ್ಕಳ ಆಟದ ಮೈದಾನಕ್ಕಾಗಿ ಗಿರಿಸಾಗರದಲ್ಲಿ ಜಾಗೆಯನ್ನು ಗುರುತಿಸಿ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮ ಪಂಚಾಯತ ಕಮೀಟಿಗೆ ಸೂಚನೆ ನೀಡಿದರು.

   ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಯಾದವಾಡದ ಹೊನ್ನಮ್ಮದೇವಿ ದೇವಸ್ಥಾನದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಸ್ವೀಕರಿಸಿದರು.

   ಗ್ರಾಮ ಪಂಚಾಯತಿ ಮತ್ತು ವಿವಿಧ ಸಂಘಗಳಿಂದ ಶಾಸಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

    ತಾಪಂ ಇಓ ಎಫ್.ಜಿ. ಚಿನ್ನನ್ನವರ, ಗ್ರಾಪಂ ಅಧ್ಯಕ್ಷ ಬಸವರಾಜ ಭೂತಾಳಿ, ಪರ್ವತಗೌಡ ಪಾಟೀಲ, ಮಹಿಳಾ ಸಂಘಗಳ ಪ್ರತಿನಿಧಿಗಳಾದ ವಿಜಯಲಕ್ಷ್ಮೀ ಅಂಬಲಿಮಠ, ಕಾವೇರಿ ಹುನಗುಂದ, ಸಂಜೀವಿನಿ ಮಂಟಾ, ಲಕ್ಷ್ಮೀ ಮಾಳೇದ, ಮುಖಂಡರಾದ ಯಲ್ಲಪ್ಪಗೌಡ ನ್ಯಾಮಗೌಡ, ಬೀರಪ್ಪ ಮುಗಳಖೋಡ, ಸುರೇಶ ಸಾವಳಗಿ, ಶ್ರೀಶೈಲ ಢವಳೇಶ್ವರ, ಮಲ್ಲಪ್ಪ ಚಕ್ಕೆನ್ನವರ, ಬಸವರಾಜ ಕೇರಿ, ಲಕ್ಷ್ಮಣ ಪಾಟೀಲ, ಕಲ್ಲಪ್ಪ ಗಾಣಿಗೇರ, ವೀರಣ್ಣಾ ಮೋಡಿ, ಗ್ರಾಪಂ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ