ಬೆಳಗಾವಿ, ನ.18 : ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕುಗಳ ಮೂಲಕ ರೈತರಿಗೆ 15,300 ಕೋಟಿ ರೂಪಾಯಿ ಸಾಲವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಇಲಾಖೆಯ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನೇತೃತ್ವದಲ್ಲಿ “ಕೋರೊನಾ ಸೋಂಕು-ಆತ್ಮ ನಿರ್ಭರ ಭಾರತ ಸಹಕಾರ ಸಂಸ್ಥೆಗಳು” ಎಂಬ ಧ್ಯೇಯದೊಂದಿಗೆ ಮಹಾಂತೇಶ ನಗರದಲ್ಲಿರುವ ಜಿಲ್ಲಾ ಹಾಲು ಒಕ್ಕೂಟದ ಡೇರಿ ಆವರಣದಲ್ಲಿ ಬುಧವಾರ (ನ.18) ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಮನಿರ್ಭರ್ ಯೋಜನೆಯಡಿ 630 ಕೋಟಿ ರೂಪಾಯಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ.
ಸಣ್ಣ ರೈತರು ಸೇರಿದಂತೆ ಲಾಕ್ ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ ಎಲ್ಲರಿಗೂ ಸಾಲ ಸೌಲಭ್ಯ ನೀಡಲಾಗುವುದು. ನಾಲ್ಕು ವಿಭಾಗಗಳ ಮೂಲಕ ಸಾಲ-ಸೌಲಭ್ಯವನ್ನು ವಿತರಿಸಲಾಗುವುದು ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.
ರೈತರ ಅನುಕೂಲಕ್ಕಾಗಿ ಕೆ.ಎಂ.ಎಫ್. ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಕಾರಿ ಕ್ಷೇತ್ರ ಮುಂಚೂಣಿಗೆ:
1905 ಕಣಗಿನಹಾಳದಲ್ಲಿ ಆರಂಭಗೊಂಡ ಸಹಕಾರ ಸಂಸ್ಥೆಯು ಇಂದು 2.30 ಜನರು ಸಹಕಾರಿ ಕ್ಷೇತ್ರದ ಸದಸ್ಯತ್ವ ಹೊಂದಿದ್ದಾರೆ.
ಸಮಾಜದ ಪ್ರತಿಯೊಂದು ರಂಗದಲ್ಲಿ ಸಹಕಾರಿ ರಂಗ ಮುಂಚೂಣಿಯಲ್ಲಿದೆ. 40 ಸಾವಿರಕ್ಕಿಂತ ಹೆಚ್ಚು ಸಂಸ್ಥೆಗಳು ವಿವಿಧ ಕ್ಷೇತ್ರದಲ್ಲಿ ಬೆಳೆದಿವೆ ಎಂದು ಸಚಿವ ಸೋಮಶೇಖರ್ ಹೇಳಿದರು.
ಕೆ.ಎಂ.ಎಫ್. ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ರಾಜ್ಯದ ಎಲ್ಲ 14 ಯುನಿಯನ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಹೈನುಗಾರರ ನೆರವಿಗೆ ಬಂದ ಸರ್ಕಾರವು ಅವರಿಂದ ಹಾಲು ಖರೀದಿಸಿ 2 ಕೋಟಿ ಲೀಟರ್ ಹಾಲನ್ನು ಉಚಿತವಾಗಿ ಜನರಿಗೆ ಹಂಚಿಕೆ ಮಾಡಿರುವುದು ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ಕೆ.ಎಂ.ಎಫ್.ಗೆ 130 ಕೋಟಿ ಲಾಭ:
ಕೆ.ಎಂ.ಎಫ್. ಸದ್ಯಕ್ಕೆ 130 ಕೋಟಿ ರೂಪಾಯಿ ಲಾಭದಲ್ಲಿದೆ. ಲಾಕ್ ಡೌನ್ ಬಳಿಕ ವ್ಯವಹಾರ ಚೇತರಿಸಿಕೊಳ್ಳುತ್ತಿದೆ.
ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರು ಸಹಕಾರಿ ಸಂಸ್ಥೆಗಳು ಲಾಭದಾಯಕವಾಗುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸೋಮಶೇಖರ್ ಹೇಳಿದರು.
ಬೆಳಗಾವಿಯಲ್ಲಿ ಮೆಗಾ ಡೇರಿ ನಿರ್ಮಾಣ:
ಬೆಳಗಾವಿ ನೂರು ಎಕರೆಯಲ್ಲಿ ಮೆಗಾ ಡೇರಿ ನಿರ್ಮಾಣ ಮಾಡುವುದು ಬಾಲಚಂದ್ರ ಜಾರಕಿಹೊಳಿ ಅವರ ಕನಸು. ಇದರಿಂದ ಈ ಭಾಗದ ನೂರಾರು ಜನರಿಗೆ ಉದ್ಯೋಗ ಲಭಿಸುವುದರ ಜತೆಗೆ ಹೈನುಗಾರಿಕೆ ಉದ್ಯಮ ಪ್ರಗತಿಯಾಗಲಿದೆ. ಶೀಘ್ರದಲ್ಲೇ ಮೆಗಾ ಡೇರಿ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂದು ಸಚಿವ ಸೋಮಶೇಖರ್ ಹೇಳಿದರು.
ಪರಸ್ಪರ ಸಹಕಾರದಿಂದ ಮಾತ್ರ ಸಹಕಾರಿ ಕ್ಷೇತ್ರ ಸದೃಢವಾಗಿ ಬೆಳೆಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಅಮುಲ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕೆ.ಎಂ.ಎಫ್. ಬೆಳವಣಿಗೆಗೆ ಬಾಲಚಂದ್ರ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ಕೂಡ ಸಹಕಾರಿ ರಂಗದಲ್ಲಿ ಮುಂಚೂಣಿಯಲ್ಲಿದೆ.
ಸ್ತ್ರೀಶಕ್ತಿ ಸಂಘಗಳು, ಸ್ವ-ಸಹಾಯ ಸಂಘಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಶೇಷ ಸಾಲ, ತರಬೇತಿ, ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ:
ಪಶುಸಂಗೋಪನೆ, ವಕ್ಫ್ ಮತ್ತು ಹಜ್ ಇಲಾಖೆಯ ಸಚಿವರಾದ ಪ್ರಭು ಚವಾಣ, ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ಗೋಮಾತೆಯ ರಕ್ಷಣೆಯ ಮೂಲಕ ಹೈನೋದ್ಯಮಕ್ಕೆ ಉತ್ತೇಜನ ನೀಡಬೇಕಿದೆ ಎಂದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂದು ಪ್ರಭು ಚವಾಣ ಸ್ಪಷ್ಟಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಭಾರತದಲ್ಲಿ ಅಮುಲ್ ಹಾಗೂ ಕೆ.ಎಂ.ಎಫ್. ಗಟ್ಟಿಯಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿವೆ ಎಂದರು.
ಪ್ರತಿದಿನ 89 ಲಕ್ಷ ಲೀಟರ್ ಹಾಲು ಸಂಗ್ರಹ ರೈತರಿಗೆ ಕೆ.ಎಂ.ಎಫ್. ಮೇಲಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.
12 ಲಕ್ಷ ಹಸು-ಎಮ್ಮೆಗಳಿಗೆ ವಿಮೆ ಭದ್ರತೆ:
ಕೆ.ಎಂ.ಎಫ್. ವತಿಯಿಂದ ರಾಜ್ಯದ ಎಲ್ಲ 12 ಲಕ್ಷ ಹಸು-ಎಮ್ಮೆಗಳಿಗೆ ವಿಮೆ ಭದ್ರತೆ ಒದಗಿಸಲಾಗುವುದು. ಇದರಿಂದ ಹೈನುಗಾರರಿಗೆ ಅನುಕೂಲವಾಗಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸದ್ಯಕ್ಕೆ 15 ಸಾವಿರ ಕೋಟಿ ವಾರ್ಷಿಕ ವಹಿವಾಟನ್ನು ಮುಂದಿನ ನಾಲ್ಕು ವರ್ಷಗಳಲ್ಲಿ 25 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
4-5 ಲಕ್ಷ ಲೀಟರ್ ಹಾಲು ಸಂಗ್ರಹಿಸಿದರೆ ಬೆಳಗಾವಿಯಲ್ಲಿ ಮೆಗಾ ಡೇರಿ ನಿರ್ಮಾಣ ಸಾಧ್ಯವಾಗಲಿದೆ ಎಂದು ಜಾರಕಿಹೊಳಿ ಹೇಳಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯವರಾದ ಬಸನಗೌಡ ಪಾಟೀಲ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕೆ.ಎಂ.ಎಫ್. ಉತ್ಪನ್ನಗಳ ಬಿಡುಗಡೆ:
ಕೆ.ಎಂ.ಎಫ್. ಬ್ರ್ಯಾಂಡಿನ ನಂದಿನಿ ಚಾಕೊಲೇಟ್, ಬಾದಾಮ ಹಲ್ವಾ, ಐದು ಬಗೆಯ ಬ್ರೆಡ್, ಐಸ್ ಕ್ರೀಂ ಮತ್ತಿತರ ಹೊಸ ಉತ್ಪನ್ನಗಳನ್ನು ಗಣ್ಯರು ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು.
ಐಸ್ ಕ್ರೀಂ ಬಿಡುಗಡೆಗೊಳಿಸಿದ ಗಣ್ಯರು ವೇದಿಕೆಯ ಮೇಲೆಯೇ ಐಸ್ ಕ್ರೀಂ ಸೇವಿಸುವ ಮೂಲಕ ಗಮನ ಸೆಳೆದರು.
ಕರ್ನಾಟಕ ಹಾಲು ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಸ್ವಾಗತಿಸಿದರು.
ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ್ ಬೆನಕೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಎಲ್ಲ ಹದಿನಾಲ್ಕು ಯೂನಿಯನ್ ಗಳ ಅಧ್ಯಕ್ಷರು ಸೇರಿದಂತೆ ಸಾವಿರಾರು ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು.
****