*ಮೂಡಲಗಿಯಲ್ಲಿ ಜರುಗಿದ ಪಿಡಿಓ ಮತ್ತು ವ್ಹಿಎಓ.ಗಳ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಬಾಲಚಂದ್ರ ಜಾರಕಿಹೊಳಿ*
*ಮೂಡಲಗಿ* : ನರೇಗಾ ಯೋಜನೆಯಡಿ ಮಂಜೂರಾಗಿರುವ 16 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಹಶೀಲ್ದಾರ ಕಛೇರಿಯ ಸಭಾ ಗೃಹದಲ್ಲಿ ಬುಧವಾರದಂದು ಜರುಗಿದ ಅರಭಾವಿ ಕ್ಷೇತ್ರದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರುವರಿ ತಿಂಗಳ ಅಂತ್ಯದೊಳಗೆ ನರೇಗಾ ಯೋಜನೆಯಡಿ ತೋಟದ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.
ಈಗಾಗಲೇ ಗ್ರಾಮ ಪಂಚಾಯತಿಗಳಿಗೆ ಅನುದಾನ ಮಂಜೂರಾಗಿದ್ದು, ರೈತಾಪಿ ವರ್ಗದ ಹಿತದೃಷ್ಟಿಯಿಂದ ತೋಟದ ರಸ್ತೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ರೈತರು ಮತ್ತು ಸಾರ್ವಜನಿಕರ ಕುಂದು-ಕೊರತೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಬೇಕು. ಕೆಲವರು ಸ್ಥಾನಿಕವಾಗಿ ಗೈರು ಹಾಜರಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಾನಿಕವಾಗಿದ್ದುಕೊಂಡು ಜನರ ಸಮಸ್ಯೆಗಳನ್ನು ನೀಗಿಸುವಂತೆ ಅವರು ಸೂಚಿಸಿದರು.
ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಪಿಂಚಣಿ ಸೌಲಭ್ಯಗಳಿಗಾಗಿ ಸಾರ್ವಜನಿಕರು ಕಛೇರಿಗೆ ಅಲೆದಾಡುತ್ತಿದ್ದರೂ ಅವರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ. ಈ ದಿಸೆಯಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಪಿಂಚಣಿಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ದೊರಕಿಸಿಕೊಡುವಂತೆ ತಿಳಿಸಿದ ಅವರು, ಸ್ಥಾನಿಕ ಮಟ್ಟದ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧಗಳನ್ನು ಇಟ್ಟುಕೊಳ್ಳಬೇಕು. ಅವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕುಲಗೋಡ ಭಾಗದ ಸಾರ್ವಜನಿಕರಿಗೆ ಅರಭಾವಿ ನಾಡ ಕಛೇರಿಗೆ ಬರಲು ಸಮಸ್ಯೆಯಾಗುತ್ತಿರುವುದರಿಂದ ವಾರದಲ್ಲಿ ಅರಭಾವಿ ಕಂದಾಯ ನಿರೀಕ್ಷಕರು ಬುಧವಾರ ಮತ್ತು ಶನಿವಾರದಂದು ಕುಲಗೋಡ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯರಾಗುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂಡಲಗಿ ತಹಶೀಲ್ದಾರ ಡಿ.ಜಿ. ಮಹಾತ, ಮೂಡಲಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನನ್ನವರ, ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅರಭಾವಿ ವಿಧಾನಸಭಾ ಮತಕ್ಷೇತ್ರದ ಎಲ್ಲ ಪಿಡಿಓ ಮತ್ತು ವ್ಹಿಎಓ ಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.