ಸಂಗನಕೇರಿ (ಘಟಪ್ರಭಾ):* ಶಬರಿಮಲೈ ಅಯ್ಯಪ್ಪಸ್ವಾಮಿಯ ಸಾನಿಧ್ಯವಾಗಿದ್ದು ಈ ಪವಿತ್ರ ದೇವಸ್ಥಾನಕ್ಕೆ ದೇಶದಾದ್ಯಂತ ಲಕ್ಷಾಂತರ ಭಕ್ತರು ಜಾತ್ಯಾತೀತ ಮನೋಭಾವನೆಯಿಂದ ಭಕ್ತಿ ಹಾಗೂ ಶೃದ್ಧಾಪೂರ್ವಕವಾಗಿ ಪಾಲ್ಗೊಂಡು ತಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಮೊರೆಯಿಡುತ್ತಾರೆ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಂಗನಕೇರಿ ಪಟ್ಟಣದಲ್ಲಿ ಇತ್ತೀಚೆಗೆ ಅಯ್ಯಪ್ಪಸ್ವಾಮಿ ಸೇವಾ ಸಮೀತಿಯಿಂದ ಜರುಗಿದ ಅಯ್ಯಪ್ಪಸ್ವಾಮಿ ಮಹಾಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಲೆ ಧರಿಸಿರುವ ಪ್ರತಿಯೊಬ್ಬ ಅಯ್ಯಪ್ಪ ಸ್ವಾಮಿ ಭಕ್ತಾಧಿಗಳು ಒಂದೇ ಕುಟುಂಬದವರಂತೆ ಸಂಕ್ರಾಂತಿ ಹಬ್ಬದಂದು ಶಬರಿಮಲೈಯಲ್ಲಿ ಕೂಡಿಕೊಳ್ಳುತ್ತಾರೆ ಎಂದು ಹೇಳಿದರು.
ಕೇರಳದಲ್ಲಿರುವ ಶಬರಿಮಲೈ ದೇವಸ್ಥಾನವು ವಿಶಿಷ್ಟವಾದ ಭವ್ಯ ಪರಂಪರೆಯನ್ನು ಹೊಂದಿದೆ. ಅದರಲ್ಲೂ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಅತ್ಯಂತ ಕಠಿಣಗಳಿಂದ ಕೂಡಿರುವ ನೀತಿ ನಿಯಮಗಳನ್ನು ಪಾಲಿಸುತ್ತಾರೆ. ಮಾಲಾಧಾರಿಗಳು ಎಲ್ಲ ಧರ್ಮ, ಜಾತಿಗಳನ್ನು ಮೀರಿ ೪೧ ದಿನಗಳ ಕಾಲ ಸ್ವಾಮಿಯ ವೃತ ಪಾಲಿಸುತ್ತಿರುವುದು ಶ್ಲಾಘನೀಯವೆಂದು ತಿಳಿಸಿದರು.
ಮಕರ ಸಂಕ್ರಾಂತಿ ಪೂರ್ವ ಶಬರಿಮಲೈ ತಲುಪಲಿರುವ ಎಲ್ಲ ಅಯ್ಯಪ್ಪಸ್ವಾಮಿ ಭಕ್ತರ ಪ್ರಯಾಣ ಸುಖಕರವಾಗಲಿ ಎಂದು ಶುಭ ಕೋರಿದರು. ಸಂಗನಕೇರಿ ಪಟ್ಟಣದಿಂದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು.
ಸಾನಿಧ್ಯವನ್ನು ಸ್ಥಳೀಯ ವೇದಮೂರ್ತಿ ಮಲ್ಲಿಕಾರ್ಜುನ ಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ, ಬಸವರಾಜ ಮಾಳೇದವರ, ಭೀಮಶಿ ಮಾಳೇದವರ, ಮಹೇಶ ಚಿಕ್ಕೋಡಿ, ಕಾಶಪ್ಪ ಕೋಳಿ, ಕುಮಾರ ಮಾಳೇದವರ, ಬಸವರಾಜ ಮಾಳ್ಯಾಗೋಳ, ದುಂಡಪ್ಪ ಮಂಗಾಲಿ, ಸತ್ತೆಪ್ಪ ಮಾಳ್ಯಾಗೋಳ, ಮಹಾಂತೇಶ ಶಿರಗೂರ, ಭೀಮಶಿ ಮರಾಠೆ, ಸಂಗನಕೇರಿ ಸುತ್ತಲಿನ ಅಯ್ಯಪ್ಪಸ್ವಾಮಿ ಗುರುಸ್ವಾಮಿಗಳು ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು.