*1.50 ಕೋಟಿ ರೂಗಳ ಸ್ವಂತ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಯುಗಾದಿಗೆ ಲೋಕಾರ್ಪಣೆ-ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ.*
*ಮೂಡಲಗಿ*: ಅರಭಾವಿ ದುರದುಂಡೀಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳ ಸಂಕಲ್ಪದಂತೆ ಅರಭಾವಿ ಮಠದ ಆವರಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 1.50 ಕೋಟಿ ರೂಗಳ ಸ್ವಂತ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗುತ್ತಿದ್ದು, ಬರುವ ಯುಗಾದಿ ಹಬ್ಬದಂದು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ಅರಭಾವಿಮಠದ ದುರದುಂಡೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅವರು, ಅರಭಾವಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳಿಗೆ ಅನುಕೂಲವಾಗಬೇಕೆಂಬ ಸದುದ್ದೇಶದಿಂದ ಮಠದ ಶ್ರೀಗಳು ಸಮುದಾಯ ಭವನ ನಿರ್ಮಾಣವಾಗಬೇಕೆಂಬ ಆಶಯದಿಂದ ಭಕ್ತರ ಅನುಕೂಲಕ್ಕಾಗಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ಮದುವೆ ಸೇರಿದಂತೆ ಇನ್ನಿತರ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಈ ಕಾಮಗಾರಿಯು ಕೋವಿಡ್ ಕಾರಣದಿಂದ ವಿಳಂಭವಾಗಿತ್ತು. ಈಗಾಗಲೇ ಬಹುತೇಕ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದ್ದು, ಉದ್ಘಾಟನೆಯೊಂದೇ ಬಾಕಿ ಇದೆ. ನಮ್ಮ ತಾಯಿ-ತಂದೆಯವರು ಸೇರಿದಂತೆ ನಮ್ಮ ಇಡೀ ಕುಟುಂಬವು ಅರಭಾವಿ ದುರದುಂಡೀಶ್ವರ ಮಠದ ಪರಮ ಭಕ್ತರಾಗಿದ್ದು, ಶ್ರೀಗಳ ಆಜ್ಞೆಯನ್ನು ನಾವುಗಳು ಶಿರಸಾ ವಹಿಸಿ ಪಾಲಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಗೋಕಾಕ ತಾಲೂಕಿನ ಪಂಚಪೀಠಗಳಲ್ಲಿ ಒಂದಾಗಿರುವ ಅರಭಾವಿ ಮಠಕ್ಕೆ ತನ್ನದೇಯಾದ ನೂರಾರು ವರ್ಷಗಳ ಇತಿಹಾಸ ಹಾಗೂ ಭವ್ಯವಾದ ಪರಂಪರೆಯನ್ನು ಹೊಂದಿದೆ. ಶ್ರೀಮಠದ ಪೀಠಾಧಿಪತಿಯಾಗಿರುವ ಸಿದ್ದಲಿಂಗ ಮಹಾಸ್ವಾಮಿಗಳು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಮೂಲಕ ಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಬೆಳವಣಿಗೆಯಲ್ಲಿ ಶ್ರೀಮಠದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ರೀಮಠದ ಪರವಾಗಿ ಸಿದ್ದಲಿಂಗ ಮಹಾಸ್ವಾಮಿಗಳು ಸತ್ಕರಿಸಿ ನೆನಪಿನ ಕಾಣಿಕೆ ನೀಡಿದರು, ನಂತರ ಸ್ವಾಮೀಜೀಗಳೊಂದಿಗೆ ಬಾಲಚಂದ್ರ ಜಾರಕಿಹೊಳಿ ಅವರು ಮಠದ ಅಭಿವೃದ್ದಿಗೆ ಸಂಬಂಧಿಸಿದಂತೆ ಕೆಲಕಾಲ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ವೇದಮೂರ್ತಿ ಶಿವಯ್ಯ ಹಿರೇಮಠ, ಮುಖಂಡರಾದ ಅಶೋಕ ಅಂಗಡಿ, ಶಂಕರ ಬಿಲಕುಂದಿ, ಅಶೋಕ ಖಂಡ್ರಟ್ಟಿ, ಸಾತಪ್ಪ ಜೈನ, ರಾಜು ಜೋಕಾನಟ್ಟಿ, ನಿಂಗಪ್ಪ ಈಳಿಗೇರ, ಮಲ್ಲಿಕಾರ್ಜುನ ಘೀವಾರಿ, ಮುತ್ತೇಪ್ಪ ಝಲ್ಲಿ, ಕೆಂಚಪ್ಪ ಮಂಟೂರ, ಭೀಮಶಿ ಅಂತರಗಟ್ಟಿ, ದುಂಡಪ್ಪ ಕುಂದರಗಿ, ಭೀಮಶಿ ಹಳ್ಳೂರ, ಸಿದ್ರಾಮಯ್ಯ ಉಗ್ರಾಣ, ಮಹಾದೇವ ಗುಡಿತೋಟ, ಗುತ್ತಿಗೆದಾರ ಲಕ್ಷ್ಮಣ ಗಡಾದ, ಕುಮಾರ ಪೂಜೇರಿ, ಅರಭಾವಿ ಪಟ್ಟಣ ಪಂಚಾಯತಿ ಸದಸ್ಯರು, ಸುತ್ತಮುತ್ತಲಿನ ಪ್ರಮುಖರು ಉಪಸ್ಥಿತರಿದ್ದರು