194 ಕೋಟಿ ರೂ. ವೆಚ್ಚದ ಕೌಜಲಗಿ ಭಾಗದ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ರೈತರಿಗೆ ವರದಾನ*
*ಗೋಕಾಕ :* ಕೌಜಲಗಿ ಭಾಗದ ರೈತರ ಬಹು ವರ್ಷಗಳ ಬೇಡಿಕೆಯಾಗಿರುವ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದ್ದು, ರೈತರ ಎಫ್.ಐ.ಸಿ ಕಾಮಗಾರಿಗೆ 32 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಚಿಕ್ಕ ನೀರಾವರಿ ಇಲಾಖೆಯಿಂದ 162 ಕೋಟಿ ರೂ. ಮೊತ್ತದ ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದೆ. ರೈತರ ಜಮೀನುಗಳಿಗೆ ಹೊಲಗಾಲುವೆ ಮೂಲಕ ನೀರು ಹರಿಸುವ ಕಾಮಗಾರಿಗೆ 32 ಕೋಟಿ ರೂ.ಗಳ ಪ್ರಸ್ತಾವಣೆಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕೌಜಲಗಿ, ಬಿಲಕುಂದಿ, ಗೋಸಬಾಳ, ಬಗರನಾಳ ಮತ್ತು ಮನ್ನಿಕೇರಿ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯ ಅನುಷ್ಠಾನದಿಂದ ಸುಮಾರು 5,680 ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ. ಬಹು ವರ್ಷಗಳ ಬೇಡಿಕೆಯಾಗಿರುವ ಕಲ್ಮಡ್ಡಿ ಏತ ನೀರಾವರಿ ಯೋಜನಾ ಅನುಷ್ಠಾನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಿರಂತರ ಸರ್ಕಾರದ ಮೇಲೆ ಒತ್ತಡ ಹೇರುತ್ತ ಕೊನೆಗೂ ಕಾಮಗಾರಿ ಪೂರ್ಣಗೊಳ್ಳಲು ಸಾಕಷ್ಟು ಶ್ರಮ ವಹಿಸಿದ್ದಾರೆ.
32 ಕೋಟಿ ರೂ. ವೆಚ್ಚದ ಎಫ್.ಐ.ಸಿ ಕಾಮಗಾರಿಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಇಷ್ಟರಲ್ಲಿಯೇ ಆರಂಭವಾಗಲಿದೆ. ಕೌಜಲಗಿ ಮತ್ತು ಸುತ್ತಲಿನ ಗ್ರಾಮಗಳ ರೈತರಿಗೆ ಆದಷ್ಟು ಬೇಗನೇ ಪೂರ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿ ಕೊಡುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.