*ನರೇಗಾ ಯೋಜನೆಯಡಿ ಅರಭಾವಿ ಕ್ಷೇತ್ರದ 34 ಗ್ರಾಮ ಪಂಚಾಯತಿಗಳಿಗೆ ತಲಾ 48 ಲಕ್ಷ ರೂ. ಬಿಡುಗಡೆ. ತೋಟದ ರಸ್ತೆಗಳಿಗೆ ತಕ್ಷಣವೇ ಕ್ರಿಯಾ ರೂಪಿಸಿ*
ಗೋಕಾಕ : ಅರಭಾವಿ ಮತಕ್ಷೇತ್ರದ ಎಲ್ಲ 34 ಗ್ರಾಮ ಪಂಚಾಯತಿಗಳಿಗೆ ರೈತರ ತೋಟದ ರಸ್ತೆಗಳ ನಿರ್ಮಾಣಕ್ಕಾಗಿ ನರೇಗಾ ಯೋಜನೆಯಡಿ 16.32 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಬುಧವಾರ ಸಂಜೆ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತಿಗಳಿಗೆ ತಲಾ 48 ಲಕ್ಷ ರೂ.ಗಳು ಬಿಡುಗಡೆಗೊಂಡಿದ್ದು, ತಕ್ಷಣವೇ ತೋಟದ ರಸ್ತೆಗಳ ಕ್ರಿಯಾ ಯೋಜನೆಗಳನ್ನು ಆಯಾ ಗ್ರಾಮ ಪಂಚಾಯತಿಗಳು ಸಿದ್ಧಪಡಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಗ್ರಾಮ ಪಂಚಾಯತಿಗಳಿಗೆ ತೋಟದ ರಸ್ತೆಗಳಿಗೆ ನರೇಗಾ ಯೋಜನೆಯಡಿ ಶೀಘ್ರ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಇತ್ತೀಚೆಗೆ ತಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇನೆ. ನನ್ನ ಕೋರಿಕೆಯ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿ ಅರಭಾವಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿಗಳಿಗೆ ನರೇಗಾ ಯೋಜನೆಯಡಿ ರೈತರ ತೋಟದ ರಸ್ತೆಗಳಿಗೆ ಅನುದಾನ ನೀಡಿ ಕಾಮಗಾರಿಗಳನ್ನು ಆರಂಭಿಸುವಂತೆ ಆದೇಶ ಹೊರಡಿಸಿದ್ದಾರೆ ಎಂದು ಅವರು ತಿಳಿಸಿದರು.
ರೈತರಿಗೆ ಯಾವುದೇ ತೊಂದರೆಯಾಗದಂತೆ ಗ್ರಾಮ ಪಂಚಾಯತಿ ಪಿಡಿಓಗಳು ತಕ್ಷಣವೇ ಕ್ರಿಯಾ ಯೋಜನೆ ಸಿದ್ಧಪಡಿಸಿ ರೈತರಿಗೆ ಅಗತ್ಯವಿರುವ ತೋಟದ ರಸ್ತೆಗಳನ್ನು ನಿರ್ಮಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಅರಭಾವಿ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಪಿಡಬ್ಲೂಡಿಯಿಂದ 32 ಕೋಟಿ ರೂ., ಆರ್ಡಿಪಿಆರ್ನಿಂದ 28 ಕೋಟಿ ರೂ, ರಾಜ್ಯ ಹೆದ್ದಾರಿಯ 22 ಕೋಟಿ ರೂ. ವೆಚ್ಚದ ಅನುದಾನದಡಿ ಈಗಾಗಲೇ ರಸ್ತೆ ಕಾಮಗಾರಿಗಳು ಚಾಲನೆಯಲ್ಲಿವೆ. ಪಿಡಬ್ಲೂಡಿಯಿಂದ ಮತ್ತೇ 10 ಕೋಟಿ ರೂ. ಅನುದಾನ ಮಂಜೂರಾಗಿದ್ದು ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. ಒಟ್ಟು 108 ಕೋಟಿ ರೂ.ಗಳ ಕಾಮಗಾರಿ ಇದಾಗಿದೆ ಎಂದು ಅವರು ಹೇಳಿದರು.
ಬಾಕಿ ಉಳಿದಿರುವ ರಸ್ತೆಗಳ ಸುಧಾರಣೆ ಕಾಮಗಾರಿಗಳಿಗಾಗಿ ಪಿಡಬ್ಲೂಡಿಗೆ 30 ಕೋಟಿ ರೂ. ಆರ್ಡಿಪಿಆರ್ಗೆ 16 ಕೋಟಿ ರೂ. ಹಾಗೂ ನೀರಾವರಿ ಇಲಾಖೆಗೆ 22 ಕೋಟಿ ರೂ. ಸೇರಿ ಒಟ್ಟು 68 ಕೋಟಿ ರೂ. ಅನುದಾನದ ಬಿಡುಗಡೆಗಾಗಿ ಪ್ರಸ್ತಾವಣೆ ಸಲ್ಲಿಸಲಾಗಿದೆ. ಪ್ರಸಕ್ತ ಮಳೆಗಾಲ ಇರುವುದರಿಂದ ಕಾಮಗಾರಿಗಳು ವಿಳಂಬವಾಗಬಹುದು. ಸಾರ್ವಜನಿಕರು ಸಹಕರಿಸುವಂತೆ ಕೋರಿಕೊಂಡಿರುವ ಅವರು, ಡಿಸೆಂಬರ್ ಅಂತ್ಯದೊಳಗೆ ಎಲ್ಲ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.