*ಹಿಡಕಲ್ ಡ್ಯಾಂ ನೀರು ಬಳಕೆದಾರರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ ಖಂಡ್ರಟ್ಟಿ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಹುಂಡೇಕರ*
*ಗೋಕಾಕ :* ಹಿಡಕಲ್ ಡ್ಯಾಂ ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಅಶೋಕ ಶಿವಪುತ್ರ ಖಂಡ್ರಟ್ಟಿ ಹಾಗೂ ಉಪಾಧ್ಯಕ್ಷರಾಗಿ ಮುಗಳಖೋಡ ಗ್ರಾಮದ ಮಲ್ಲಿಕಾರ್ಜುನ ಪರಮಾನಂದ ಹುಂಡೇಕರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರದಂದು ಹಿಡಕಲ್ ಡ್ಯಾಂನ ಮಹಾಮಂಡಳದ ಪ್ರಧಾನ ಕಛೇರಿಯಲ್ಲಿ ಜರುಗಿದ ಮಹಾಮಂಡಳದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಹುಕ್ಕೇರಿ ತಹಶೀಲ್ದಾರ ಡಿ.ಎಚ್. ಹೂಗಾರ ಪ್ರಕಟಿಸಿದರು.
ಮಹಾಮಂಡಳದ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಚುನಾವಣಾಧಿಕಾರಿ ಡಿ.ಎಚ್. ಹೂಗಾರ, ಸಹಾಯಕ ಚುನಾವಣಾಧಿಕಾರಿ ಎಸ್.ಎ. ಪಾಟೀಲ ಅವರು ಅಭಿನಂದಿಸಿದರು.
ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ 2022 ರಿಂದ ಮುಂದಿನ 5 ವರ್ಷಗಳವರೆಗಿನ ಈ ಮಹಾಮಂಡಳದ ಆಡಳಿತ ಮಂಡಳಿ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ 15 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಕೇವಲ ಒಂದು ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿಯೂ ಸಹ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಅವಿರೋಧವಾಗಿ ಆಯ್ಕೆ ನಡೆದಿದೆ.
ಈ ಸಂದರ್ಭದಲ್ಲಿ ಮಹಾಮಂಡಳದ ನೂತನ ನಿರ್ದೇಶಕರಾದ ಬಸವರಾಜ ಕಲ್ಲಟ್ಟಿ, ಶಿವಪ್ಪ ನಾಯಿಕ, ಬಸಪ್ಪ ಪಂಡ್ರೊಳ್ಳಿ, ಅರ್ಜುನ ನಾಯಿಕವಾಡಿ, ಕೆಂಪಣ್ಣಾ ಮುಧೋಳ, ಅಣ್ಣಪ್ಪ ಘಂಟಿ, ಮಹಾದೇವ ಸಂಗೋಟಿ, ನೇಮಿನಾಥ ನಾಗನೂರ, ಸಂಜೀವಕುಮಾರ ಬಾನೆ, ರಾಯಗೌಡ ಖೇತಗೌಡರ, ಉಮೇಶ ಸಿದ್ದರಡ್ಡಿ, ಸಂಜೀವ ನಡುವಿನಮನಿ, ರಾಮಪ್ಪ ಪಾಟೀಲ, ವೆಂಕಣ್ಣಾ ಜಂಬಗಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮಹಾಮಂಡಳದ ಸಿಇಓ ವಿ.ಎಸ್. ಮುದನೂರ ಮುಂತಾದವರು ಉಪಸ್ಥಿತರಿದ್ದರು.
ಈ ಹಿಂದಿನ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಶೋಕ ಖಂಡ್ರಟ್ಟಿ ಅವರು ಎರಡನೇ ಬಾರಿಗೆ ಮಹಾಮಂಡಳದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ.
ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ನೀರು ಬಳಕೆದಾರರ ಮಹಾಮಂಡಳದ ಅಭಿವೃದ್ಧಿ ಮತ್ತು ರೈತರ ಆಶಯದಂತೆ ಕರ್ತವ್ಯ ನಿರ್ವಹಿಸುವುದಾಗಿ ಮಹಾಮಂಡಳದ ನೂತನ ಅಧ್ಯಕ್ಷ ಅಶೋಕ ಖಂಡ್ರಟ್ಟಿ ಅವರು ತಿಳಿಸಿದರು.