೧೬೧.೨೦ ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಕಲ್ಮಡ್ಡಿ ಕಾಮಗಾರಿಯನ್ನು ಪರಿಶೀಲನೆ ಮಾಡಿದ ಬಾಲಚಂದ್ರ ಜಾರಕಿಹೊಳಿ.
ಗೋಕಾಕ್- ಗೋಸಬಾಳ- ಕೌಜಲಗಿ ಭಾಗದ ಸುತ್ತಮುತ್ತಲಿನ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ಎಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶುಕ್ರವಾರದಂದು ಕೌಜಲಗಿ ಬಳಿ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಈ ಮಾಹಿತಿ ನೀಡಿದ ಬಾಲಚಂದ್ರ ಜಾರಕಿಹೊಳಿ ಅವರು, ಕೌಜಲಗಿ ಭಾಗದ ಬಹು ವರ್ಷಗಳ ಪ್ರಮುಖ ಬೇಡಿಕೆಯಾಗಿದ್ದ ಕಲ್ಮಡ್ಡಿ ಏತ ನೀರಾವರಿ ಯೋಜನೆ ಅನುಷ್ಠಾನವು ೧೬೧.೨೦ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಈಗಾಗಲೇ ಪ್ರಾಯೋಗಿಕವಾಗಿ ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಕೌಜಲಗಿ, ಗೋಸಬಾಳ, ಬಿಲಕುಂದಿ, ಮನ್ನಿಕೇರಿ, ಬಗರನಾಳ ಗ್ರಾಮಗಳ ಸುಮಾರು ೫೬೮೫ ಎಕರೆ ( ೨೩೦೦ ಹೆಕ್ಟೇರ್) ಪ್ರದೇಶಕ ನೀರಾವರಿ ಸೌಲಭ್ಯ ದೊರಕಲಿದೆ ಎಂದು ಹೇಳಿದರು.
ಹೊಲಗಾಲುವೆ ಕಾಮಗಾರಿ (ಎಫ್ಐಸಿ) ಗೆ ಈಗಾಗಲೇ ೩೨ ಕೋಟಿ ರೂ. ಗಳನ್ನು ನೀಡುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ೧೨೦ ಹೆಕ್ಟೇರ್ ಎತ್ತರದ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆಯೂ ಸಹ ಒಳಗೊಂಡಿದೆ. ಎಲ್ಲಿ ನೀರು ಹರಿಯುವುದಿಲ್ಲವೋ ಅಂತಹ ಎತ್ತರದ ಪ್ರದೇಶದಲ್ಲಿ ಹನಿ ನೀರಾವರಿಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಹಣಕಾಸು ಇಲಾಖೆಯಿಂದ ಎಫ್ಐಸಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ತಳಕಟ್ನಾಳ ಗ್ರಾಮದ ಹತ್ತೀರ ಘಟಪ್ರಭಾ ನದಿ ತೀರದಲ್ಲಿ ಜಾಕ್ ವೆಲ್ ಮತ್ತು ಪಂಪ್ ಹೌಸ್ ಕಾಮಗಾರಿಯೂ ಸಹ ಪೂರ್ಣಗೊಂಡಿದೆ. ಎಪ್ರಿಲ್ ತಿಂಗಳಲ್ಲಿ ರೈತರ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ಕೌಜಲಗಿ ಭಾಗದ ರೈತಾಪಿ ವರ್ಗದವರಿಗೆ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಅರ್ಪಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಭಾ ಶುಗರ್ಸ್ ನಿರ್ದೇಶಕ ಎಂ.ಆರ್.ಭೋವಿ, ಜಿ.ಪಂ.ಮಾಜಿ ಸದಸ್ಯರಾದ ಆರ್.ವೈ.ಸಣ್ಣಕ್ಕಿ, ಪರಮೇಶ್ವರ ಹೊಸಮನಿ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಬಿ.ಲೋಕನ್ನವರ, ಪಿಕೆಪಿಎಸ್ ನಿರ್ದೇಶಕ ರವೀಂದ್ರ ಪರುಶೆಟ್ಟಿ, ಡಾ.ಡಿ.ಎಸ್.ನದಾಫ, ಮಾರುತಿ ಥರಕಾರ, ನೀಲಪ್ಪ ಕೇವಟಿ, ಜಿ.ಎಸ್. ಲೋಕನ್ನವರ, ಶಾಂತಪ್ಪ ಹಿರೇಮೇತ್ರಿ, ಅಶೋಕ ಹೊಸಮನಿ, ಹಾಸೀಮಸಾಬ ನಗಾರ್ಚಿ, ಡಿ.ಜೆ.ಮುಲ್ತಾನಿ, ಯಲ್ಲಪ್ಪ ದಾನನ್ನವರ, ಅಶೋಕ ಶಿವಾಪೂರ, ಕಲ್ಮಡ್ಡಿ ಭಾಗದ ಹಲವು ರೈತರು, ಅಧಿಕಾರಿಗಳು ಉಪಸ್ಥಿತರಿದ್ದರು.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ ೧೬೧.೨೦ ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿರುವ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯನ್ನು ಕೌಜಲಗಿ ಬಳಿ ಶುಕ್ರವಾರದಂದು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.