ಬೆಂಗಳೂರು: ಪಂಚರಾಜ್ಯಗಳ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತ ಪೂರ್ವ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ವಿಧಾನ ಸಭಾ ಚುನಾವಣೆಗಳಲ್ಲಿ ಪಂಜಾಬ್ ಹೊರತುಪಡಿಸಿ ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿಯು ನಿಚ್ಚಳ ಬಹುಮತದತ್ತ ಸಾಗುತ್ತಿದೆ. ಅಂತಿಮ ಫಲಿತಾಂಶ ನಮ್ಮ ಪಾರ್ಟಿಯದ್ದೆ. ಸ್ಪಷ್ಟ ಬಹುಮತ ಪಡೆಯಲಿದೆ. ದೇಶದ ಸಮಗ್ರ ಅಭಿವೃದ್ಧಿ ಹಿನ್ನಲೆಯಲ್ಲಿ ಪ್ರಧಾನಿಗಳ ಜನಪರ ಕಾರ್ಯಗಳಿಗೆ ಮತದಾರರು ಬಹುಪರಾಖ್ ಹೇಳಿದ್ದಾರೆ.
ಮುಂದೆ ನಡೆಯುವ ವಿವಿಧ ರಾಜ್ಯಗಳ ವಿಧಾನ ಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಈ ಚುವಾವಣಾ ಫಲಿತಾಂಶ ದಿಕ್ಸೂಚಿಯಾಗಲಿದೆ. 2024 ರಲ್ಲಿ ನಡೆಯುವ ನಮ್ಮ ಕರ್ನಾಟಕ ರಾಜ್ಯದ ಚುನಾವಣೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರ ಪಡೆಯಲಿದೆ ಎಂದು ಹೇಳಿದರು.
ಐದರ ಪೈಕಿ ನಾಲ್ಕು ರಾಜ್ಯಗಳಲ್ಲಿ ಸ್ಪಷ್ಟ ಬಹುಮತ ಪಡೆದು ಜನರ ಆಶೀರ್ವಾದದಿಂದ ಅಧಿಕಾರದ ಗದ್ದುಗೆ ಹಿಡಿಯಲು ಸಾರಥಿ ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಹಾಗೂ ಸಹಕಾರ ಸಚಿವ ಅಮಿತ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸಿರುವ ಅವರು, ಸಕಲ ಕಾರ್ಯಕರ್ತರ ಪಡೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ದೇಶದಲ್ಲಿ ನರೇಂದ್ರ ಮೋದಿ ಅವರದ್ದೇ ಹವಾ ಎಂದು ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.