ಗೋಕಾಕ: ಮೆಳವಂಕಿ ಸೇತುವೆ ಕುಸಿತದಿಂದ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಕೂಡಲೇ 70 ಲಕ್ಷ ರೂ.ಗಳನ್ನು ನೀಡುವದಾಗಿ ಕೆಎಮ್‍ಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ಇಂದು ಬೆಳಗಿನ ಜಾವ ಸೇತುವೆ ಕುಸಿತಗೊಂಡ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿರುವ ಅವರು, ಕೂಡಲೇ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ಹಹಿಸಿ ಬೈಪಾಸ್ ರಸ್ತೆ ನಿರ್ಮಿಸಿ ರೈತರಿಗೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ನಾಳೆಯಿಂದಲೇ ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೇತುವೆ ಕುಸಿತದ ಸಂದರ್ಭದಲ್ಲಿ ಯಾವುದೇ ಅನಾಹುತಗಳು ಸಂಭವಿಸದೇ ಇರುವದು ದೇವರ ದಯೆಯಾಗಿದೆ ಎಂದು ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ಕುಸಿತಗೊಂಡ ಮೆಳವಂಕಿ ಸೇತುವೆ-ದಂಡಿನ ಮಾರ್ಗ ರಸ್ತೆ ಸಂಚಾರ ಸ್ಥಗಿತ.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗೋಕಾಕ-ಕೌಜಲಗಿ ದಂಡಿನ ಮಾರ್ಗದಲ್ಲಿಯ ಮೆಳವಂಕಿ ಗ್ರಾಮದ ಬಳಿಯ ಸೇತುವೆ ಸೋಮವಾರ ಬೆಳಗಿನ ಜಾವ ಹಠಾತ್ತನೇ ಕುಸಿತಗೊಂಡು ದಂಡಿನ ಮಾರ್ಗ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಗೋಕಾಕದಿಂದ ಕೌಜಲಗಿವರೆಗಿನ ಸಂಪರ್ಕ ಕಲ್ಪಿಸುವ ದಂಡಿನ ಮಾರ್ಗದಲ್ಲಿ ಮೆಳವಂಕಿ ಸೇತುವೆ ಕುಸಿದಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡು, ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 1985ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡಿರುವ ಈ ಸೇತುವೆಯು ಪ್ರತಿ ಸಾರಿ ಪ್ರವಾಹ ಬಂದಾಗಲೆಲ್ಲಾ ಸಂಪೂರ್ಣವಾಗಿ ಮುಳುಗಡೆಯಾಗುತ್ತಿತ್ತು. ಅಲ್ಲದೇ ಕಳೆದ ಹಲವಾರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಯು ಶಿಥಿಲಗೊಂಡು ಬೆಳಗಿನ ಜಾವ 6-30 ಗಂಟೆಗೆ ಕುಸಿದು ಬಿದ್ದಿತು. ಸುದೈವಕ್ಕೆ ಆ ಸಮಯದಲ್ಲಿ ಯಾವುದೇ ವಾಹನ ಸಂಚಾರ ಇರಲಿಲ್ಲ. ಆದರೆ 6 ಘಂಟೆಗೆ ಬಸ್ ಸಮೇತ ಕೆಲ ಖಾಸಗಿ ವಾಹನಗಳು ಸೇತುವೆ ಮೇಲಿಂದ ದಾಟಿರುವದು ಗಮನಿಸಬಹುದು. ಸೇತುವೆ ಕುಸಿತಗೊಂಡಿದ್ದರಿಂದ ಮೆಳವಂಕಿ, ಹಡಗಿನಾಳ, ಕಲಾರಕೊಪ್ಪ ಗ್ರಾಮಗಳ ಸಂಚರಿಸಲು ತೊಂದರೆಯಾಗಿದೆ.
ಈ ಸೇತುವೆ ಕುಸಿತದ ವಿಷಯ ತಿಳಿದ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೂಡಲೇ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಶಾಸಕರ ಸೂಚನೆ ಮೇರೆಗೆ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಬೆಳಗಾವಿ ಲೋಕೋಪಯೋಗಿ ಇಲಾಖೆಯ ಅಧಿಕ್ಷಕ ಅಭಿಯಂತರ ಪಿ.ವಾಯ್.ಪವಾರ, ಚಿಕ್ಕೋಡಿಯ ಕಾರ್ಯನಿರ್ವಾಹಕ ಅಭಿಯಂತರ ವಿ.ಎನ್.ಪಾಟೀಲ, ಎಇಇ ಆರ್.ಎ.ಗಾಣಿಗೇರ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.