ಮೂಡಲಗಿ: ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡುವಾರು ಸಭೆಗಳನ್ನು ನಡೆಸಿ ನಾಳೆಯೊಳಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಸೋಮವಾರದಂದು ಮಾರುತಿ ದೇವಸ್ಥಾನದ ಸಭಾ ಭವನದಲ್ಲಿ ಪಟ್ಟಣ ಪಂಚಾಯತಿ ಚುನಾವಣೆ ನಿಮಿತ್ಯ ಜರುಗಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಇದೇ ತಿಂಗಳ 27 ರಂದು ಪಟ್ಟಣ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ಬರುವ ಬುಧವಾರದಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದರಿಂದ ನಾಳೆ ರಾತ್ರಿಯೊಳಗೆ ಆಯಾ ವಾರ್ಡುಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಈ ಚುನಾವಣೆಯಲ್ಲಿ ಯಾರೂ ಅನಾವಶ್ಯಕವಾಗಿ ಖರ್ಚು ಮಾಡಬಾರದು. ಅಭಿವೃದ್ಧಿಯೊಂದೇ ನಮ್ಮ ಮುಂದಿರುವ ಗುರಿಯಾಗಿರಬೇಕು. ಅಭಿವೃದ್ಧಿ ಮೂಲಕ ಜನರ ಪ್ರೀತಿ ವಿಶ್ವಾಸ ಸಂಪಾದನೆ ಮಾಡಬೇಕು.
ಹಿರಿಯರ ಮಾತಿಗೆ ಎಲ್ಲರೂ ಗೌರವ ನೀಡಬೇಕು. ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಯೋಗ್ಯ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಕಣಕ್ಕಿಳಿಸುವ ಭರವಸೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ವಾರ್ಡುವಾರು ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಎಲ್ಲರಿಗೂ ಟಿಕೇಟ್ ನೀಡಲು ಸಾಧ್ಯವಿಲ್ಲ. ಅಧಿಕವಾಗಿ ಜಾತಿ ಜನಾಂಗಗಳು ಇದ್ದುದ್ದರಿಂದ ಎಲ್ಲ ಸಮಾಜಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿಲ್ಲ. ಕಲ್ಲೋಳಿ ಪಟ್ಟಣದಲ್ಲಿ 16 ವಾರ್ಡುಗಳಿಗೆ ಚುನಾವಣೆ ನಡೆಸಬೇಕಿದೆ. ಹಿರಿಯರು ತೆಗೆದುಕೊಳ್ಳುವ ನಿರ್ಣಯಕ್ಕೆ ಆಕಾಂಕ್ಷಿಗಳು ಬದ್ಧರಿರಬೇಕು. ಎಲ್ಲರೂ ಒಟ್ಟಿಗೆ ಸೇರಿ ಅವಿರೋಧ ಆಯ್ಕೆಗೆ ಶ್ರಮಿಸೋಣ. ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ ಅನಿವಾರ್ಯವಾಗಿ ಪಕ್ಷದಿಂದ ಚುನಾವಣೆಗೆ ನಿಲ್ಲಿಸೋಣ. ದಿನದ 24 ತಾಸು ರಾಜಕೀಯ ಮಾಡುವುದಕ್ಕಿಂತ ಅಭಿವೃದ್ಧಿ ಕಾರ್ಯಗಳಿಗೆ ಗಮನ ನೀಡುವುದು ಸೂಕ್ತ. ಕಲ್ಲೋಳಿ ಮಾರುತಿ ದೇವರ ದರ್ಶನಕ್ಕೆ ಕರ್ನಾಟಕದ ನೆರೆ ಹೊರೆಯ ಅಪಾರ ಭಕ್ತರು ಆಗಮಿಸುತ್ತಿರುವುದರಿಂದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ವಾಂಗಿಣ ಅಭಿವೃದ್ಧಿಗೆ ಗಮನ ನೀಡಬೇಕಾಗಿದೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಅವರಿಂದ ಸಾಕಷ್ಟು ಅನುದಾನ : ರಾಜ್ಯದಲ್ಲಿಯೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೈಗೊಂಡಿರುವಷ್ಟು ಅಭಿವೃದ್ಧಿ ಕಾರ್ಯಗಳು ಯಾರೂ ಮಾಡಿಲ್ಲ. ಅಲ್ಲದೇ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ನೂರಾರು ಕೋಟಿ ರೂ. ಅನುದಾನವನ್ನು ಸದ್ಬಳಕೆ ಮಾಡಿದ್ದಾರೆ. ಅಲ್ಲದೇ ಸ್ವತಃ ಸ್ವಂತ ಖರ್ಚಿನಲ್ಲಿಯೂ ಸಹ ಜನರ ಮೂಲ ಸೌಕರ್ಯಗಳಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಅವರ ಅಭಿವೃದ್ಧಿ ಪರ ಕಾರ್ಯಗಳನ್ನು ಕಡಾಡಿ ಶ್ಲಾಘಿಸಿದರು. ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಬಸವಂತ ದಾಸನವರ, ಶಿವಗೊಂಡ ವ್ಯಾಪಾರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದಾದ ಬಳಿಕ ನಾಗನೂರ ಮತ್ತು ಅರಭಾವಿ ಪಟ್ಟಣ ಪಂಚಾಯತಿಗಳ ಪೂರ್ವಭಾವಿ ಸಭೆಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಸಂಸದ ಈರಣ್ಣ ಕಡಾಡಿ ನೇತೃತ್ವದಲ್ಲಿ ನಡೆಸಲಾಯಿತು.