Breaking News

ನದಿ ತೀರದ ಗ್ರಾಮಗಳ ಸಂತ್ರಸ್ಥ ಕುಟುಂಬಗಳಿಗೆ ಶೀಘ್ರ ವಸತಿ ಸೌಲಭ್ಯ : ಕೆಎಂಎಪ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ


ಮೂಡಲಗಿ : ಪ್ರವಾಹ ಹಾಗೂ ಅತೀವೃಷ್ಟಿಯಿಂದಾಗಿ ಹಾನಿಗೊಳಗಾದ ಮನೆಗಳ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಡಾಟಾ ಎಂಟ್ರಿ ಆದ ಸಂತ್ರಸ್ತ ಕುಟುಂಬಸ್ಥರಿಗೆ ಆದಷ್ಟು ಬೇಗನೇ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿಯ ತಹಶೀಲ್ದಾರ ಕಛೇರಿಯಲ್ಲಿ ಕಳೆದ ಸೋಮವಾರದಂದು ಮೂಡಲಗಿ ಹಾಗೂ ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಂತ್ರಸ್ಥ ಕುಟುಂಬಸ್ಥರಿಗೆ ಯಾವುದೇ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

೨೦೧೯ ರಿಂದ ೨೦೨೧ ರವರೆಗೆ ಪ್ರವಾಹ ಹಾಗೂ ಮಳೆಯಿಂದಾಗಿ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಅರಭಾವಿ ಮತಕ್ಷೇತ್ರದ ನದಿ ತೀರದ ಗ್ರಾಮಗಳಲ್ಲಿನ ಮನೆಗಳು ಹಾನಿಗೀಡಾಗಿವೆ. ಕಳೆದ ಸೆಪ್ಟೆಂಬರ್ ೨೩ ರಂದು ನದಿ ತೀರದ ಗ್ರಾಮಗಳ ಸಂತ್ರಸ್ಥ ಕುಟುಂಬದವರು ನನಗೆ ಸಲ್ಲಿಸಿದ ಮನವಿಯ ಮೇರೆಗೆ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಿದ್ದು, ಹಾನಿಗೀಡಾಗಿರುವ ಕುಟುಂಬಗಳಿಗೆ ಅನುಕೂಲ ಕಲ್ಪಿಸಿಕೊಡಲು ಸೂಚನೆ ನೀಡಲಾಗಿದೆ.

ಪಿಡಿಓ, ಗ್ರಾಮ ಲೆಕ್ಕಾಧಿಕಾರಿ, ಇಂಜನೀಯರ ನೇತೃತ್ವದ ಸಮೀಕ್ಷಾ ತಂಡವು ಈಗಾಗಲೇ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿದ್ದು, ೩೩೦೫ ಮನೆಗಳು ಡಾಟಾ ಎಂಟ್ರಿಯಾಗಿವೆ. ಇದರಲ್ಲಿ ಮೂಡಲಗಿ ತಾಲೂಕಿನಲ್ಲಿ ೯೬೬ ಮತ್ತು ಗೋಕಾಕ ತಾಲೂಕಿನ ಅರಭಾವಿ ಕ್ಷೇತ್ರಕ್ಕೊಳಪಡುವ ಗ್ರಾಮಗಳಲ್ಲಿ ೨೩೩೯ ಮನೆಗಳ ಡಾಟಾ ಎಂಟ್ರಿಯಾಗಿವೆ. ಇದರಲ್ಲಿ ಗೋಕಾಕ ತಾಲೂಕಿನಲ್ಲಿ ಎ ವರ್ಗದಲ್ಲಿ ೧೩೪, ಬಿ ವರ್ಗದಲ್ಲಿ ೨೦೮೯ ಮತ್ತು ಸಿ ವರ್ಗದಲ್ಲಿ ೧೧೬ ಮನೆಗಳಿದ್ದು, ಮೂಡಲಗಿ ತಾಲೂಕಿನಲ್ಲಿ ಎ ವರ್ಗದಲ್ಲಿ ೨೫, ಬಿ ವರ್ಗದಲ್ಲಿ ೮೨೭ ಮತ್ತು ಸಿ ವರ್ಗದಲ್ಲಿ ೧೧೪ ಮನೆಗಳ ಡಾಟಾ ಎಂಟ್ರಿಯಾಗಿದ್ದು, ಅಧಿಕಾರಿಗಳು ಸಂತ್ರಸ್ಥ ಕುಟುಂಬಗಳಿಗೆ ಮನೆ ನಿರ್ಮಿಸಲು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಅರಭಾವಿ ಕ್ಷೇತ್ರದಲ್ಲಿ ರಸ್ತೆಗಳ ಸುಧಾರಣೆಗಾಗಿ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನವನ್ನು ವಿನಿಯೋಗಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿಯಿಂದ ವರ್ತಿಸುವ ಮೂಲಕ ಕರ್ತವ್ಯದಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ. ರಸ್ತೆ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಸ್ಥಳಕ್ಕೆ ಧಾವಿಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರಗಳನ್ನು ಬದಲಾಯಿಸಿ ರೈತರಿಗೆ ಸಮರ್ಪಕ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಬೇಕು. ರೈತರಿಗೆ ಯಾವುದೇ ರೀತಿಯ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಲು ಸೂಚಿಸಿದರು. ಗೋಸಬಾಳ ೧೧೦ ಕೆವ್ಹಿ ಸ್ಟೇಷನ್ ಕಾಮಗಾರಿ ಪ್ರಗತಿಯಲ್ಲಿದ್ದು, ಜನೇವರಿ ತಿಂಗಳೋಳಗೆ ಪೂರ್ಣಗೊಳಿಡಲು ಸೂಚಿಸಿದ ಅವರು, ಹಳ್ಳೂರ ಮತ್ತು ಅರಳಿಮಟ್ಟಿಯಲ್ಲಿ ೧೧೦ ಕೆವ್ಹಿ ಸ್ಟೇಷನ್ ಕಾಮಗಾರಿಗೆ ಟೆಂಡರ್ ಕರೆಯಬೇಕು. ತುಕ್ಕಾನಟ್ಟಿ ೧೧೦ ಕೆವ್ಹಿ ಸ್ಟೇಷನ್ ಮಂಜೂರಾಗಿದ್ದು, ನಿವೇಶನದ ಸಮಸ್ಯೆಯಿಂದ ಕಾಮಗಾರಿಗೆ ಸಮಸ್ಯೆಯಾಗಿದ್ದು, ಕೂಡಲೇ ಬೇರೆ ಕಡೆ ನಿವೇಶನ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ಪರಿಹಾರವನ್ನು ವಿತರಿಸಲಾಗುತ್ತಿದ್ದು, ಈಗಾಗಲೇ ೫ ಕೋಟಿ ರೂ.ಗಳಷ್ಟು ಬೆಳೆ ಹಾನಿ ಪರಿಹಾರವನ್ನು ರೈತರಿಗೆ ನೀಡಿದ್ದು, ಶೇ ೩೦ ರಷ್ಟು ರೈತರಿಗೆ ಇನ್ನೂ ಪರಿಹಾರ ನೀಡಬೇಕಾಗಿದೆ ಎಂದು ಹೇಳಿದರು.

ಕೌಜಲಗಿ ಹಾಗೂ ಸುತ್ತಲಿನ ಗ್ರಾಮಗಳ ರೈತರಿಗೆ ವರದಾನವಾಗಿರುವ ಸುಮಾರು ೧೬೦ ಕೋಟಿ ರೂ. ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಸಣ್ಣ ನೀರಾವರಿ ಸಚಿವರನ್ನು ಆಹ್ವಾನಿಸಿ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಇಷ್ಟರಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಮೂಡಲಗಿಯಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಪುರಸಭೆಯಿಂದ ೩ ಎಕರೆ ನಿವೇಶನವನ್ನು ಗುರುತಿಸಲಾಗಿದೆ. ಆರೋಗ್ಯ ಇಲಾಖೆಯವರು ಬಾಕಿ ಉಳಿದಿರುವ ಕೋವಿಡ್ ಲಸಿಕೆಯನ್ನು ಹಾಕಿಸಲು ಇತರೇ ಇಲಾಖೆಗಳ ಸಹಕಾರದೊಂದಿಗೆ ನಿಗದಿಪಡಿಸಿದ ಮೊದಲ ಹಾಗೂ ಎರಡನೇ ಲಸಿಕೆಯನ್ನು ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ಮೂಡಲಗಿ ಬಿಇಓ ಅಜೀತ ಮನ್ನಿಕೇರಿ ಸೇರಿದಂತೆ ತಾಲೂಕಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ