ಗೋಕಾಕ : “ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ” ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಕಳೆದ ಗುರುವಾರದಂದು ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ ಬಳಿಕ, ಮಾತನಾಡಿದ ಅವರು,ಕಾರ್ಖಾನೆಗೆ ಉತ್ತಮ ಇಳುವರಿ ಕಬ್ಬನ್ನು ಪೂರೈಕೆ ಮಾಡುವ ಮೂಲಕ ಕಾರ್ಖಾನೆಯ ಅಭಿವೃದ್ಧಿಗೆ ಕೈ ಜೋಡಿಸುವಂತೆ ರೈತರಲ್ಲಿ ಮನವಿ ಮಾಡಿಕೊಂಡರು.
ಕಳೆದ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ 2500 ರೂ. ಬಿಲ್ಲನ್ನು ರೈತರಿಗೆ ಘೋಷಿಸಲಾಗಿತ್ತು. ಅದರಲ್ಲಿ , ಈಗಾಗಲೇ 2400 ರೂ.ಗಳನ್ನು ಕಬ್ಬು ಪೂರೈಸಿದ ರೈತರಿಗೆ ಬಿಲ್ ಸಂದಾಯ ಮಾಡಿದ್ದು. ಇನ್ನುಳಿದ 100 ರೂ.ಗಳನ್ನು 15 ದಿನಗಳೊಳಗಾಗಿ ಪಾವತಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಖಾನೆಯ ಪ್ರಗತಿಯಲ್ಲಿ ರೈತರು ಹಾಗೂ ಕಾರ್ಮಿಕರ ಪಾತ್ರ ಮುಖ್ಯವಾಗಿದೆ. ಈ ಭಾಗದ ಸಂಜೀವಿನಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತರ ಹಿತಾಸಕ್ತಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಉತ್ತಮ ಇಳುವರಿ ಹೊಂದಿರುವ ಕಬ್ಬನ್ನು ನಮ್ಮ ಕಾರ್ಖಾನೆಗೆ ಪೂರೈಸಬೇಕು. ಇಳುವರಿ ಕಬ್ಬನ್ನು ಪೂರೈಸಿದರೆ ಕಾರ್ಖಾನೆ ಹಾಗೂ ರೈತರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ನಮ್ಮ ನೆರೆ ಹೊರೆಯ ಕಾರ್ಖಾನೆಯವರು ನೀಡುವ ದರವನ್ನು ನಾವೂ ನೀಡುತ್ತೇವೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದರವನ್ನು ಅವರ ಖಾತೆಗಳಿಗೆ ಜಮಾ ಮಾಡುತ್ತೇವೆ. ಕಬ್ಬು ಪೂರೈಕೆ ಮಾಡುತ್ತಿರುವ ರೈತರಿಗೆ ಪ್ರತಿ 20 ದಿನಕ್ಕೊಮ್ಮೆ ರೈತರ ಬ್ಯಾಂಕ್ ಖಾತೆಗಳಿಗೆ ಬಿಲ್ ಸಂದಾಯ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರಭಾವಿ ದುರದುಂಡೀಶ್ವರ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ ವಹಿಸಿದ್ದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಕಾರ್ಖಾನೆಯ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ನಿರ್ದೇಶಕ ಮಂಡಳಿ ಸದಸ್ಯರಾದ ಬಸಗೌಡ ಪಾಟೀಲ, ಕೆಂಚನಗೌಡ ಪಾಟೀಲ, ಶಿದ್ಲಿಂಗ ಕಂಬಳಿ, ಭೂತಪ್ಪ ಗೋಡೇರ, ಲಕ್ಷ್ಮಣ ಗಣಪ್ಪಗೋಳ, ಗಿರೀಶ ಹಳ್ಳೂರ, ಶಿವಲಿಂಗ ಪೂಜೇರಿ, ಕೃಷ್ಣಪ್ಪ ಬಂಡ್ರೊಳ್ಳಿ, ಮಾಳಪ್ಪ ಜಾಗನೂರ, ಮಲ್ಲಿಕಾರ್ಜುನ ಕಬ್ಬೂರ, ಎಂ.ಆರ್. ಭೋವಿ, ಲಕ್ಕವ್ವಾ ಬೆಳಗಲಿ, ಯಲ್ಲವ್ವ ಸಾರಾಪೂರ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಮಂಟೂರ, ಸಿಇಓ ನಿತೀನಕುಮಾರ, ಸಿಡಿಓ ಸಿ.ಬಿ. ಪಾಶ್ಚಾಪೂರ, ಸಹಕಾರಿಗಳು ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA