ಬೆಂಗಳೂರು : ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರನ್ನು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭೇಟಿ ಮಾಡಿ ಶುಭಾಶಯ ಕೋರಿದರು.
ಬೆಂಗಳೂರಿನ ಆರ್‍ಟಿ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಬುಧವಾರ ಸಂಜೆ ತೆರಳಿದ ಬಾಲಚಂದ್ರ ಜಾರಕಿಹೊಳಿ ಅವರು ಹೂಗುಚ್ಛ ನೀಡಿ ಶುಭ ಹಾರೈಸಿದರು.
ಬಸವರಾಜ ಬೊಮ್ಮಾಯಿ ಅವರು ಈ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಆಡಳಿತದಲ್ಲಿ ಸಾಕಷ್ಟು ಅನುಭವ ಹೊಂದಿರುವ ಬೊಮ್ಮಾಯಿ ಅವರು, ಪಕ್ಷದ ಸಂಘಟನೆಗೂ ಸಹ ಆಸರೆಯಾಗಿ ನಿಲ್ಲಲಿದ್ದಾರೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಂತೆ ರಾಜ್ಯದ ಸರ್ವಾಂಗೀಣ ವಿಕಾಸಕ್ಕೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಬಡವರು, ಮಹಿಳೆಯರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಹಿತಕ್ಕನುಗುಣವಾಗಿ ಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರ ಕೆಲಸ ನಿರ್ವಹಿಸಲಿದೆ. ಇವರಿಂದ ಇಡೀ ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆಯದಾಗಲಿದೆ. ಮೂಲತಃ ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯವರು ಎಂಬುದು ನಮಗೆಲ್ಲ ಹೆಮ್ಮೆಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಹುಬ್ಬಳ್ಳಿ ಶಾಸಕ ಅರವಿಂದ ಬೆಲ್ಲದ, ನೆಲಮಂಗಲ ಮಾಜಿ ಶಾಸಕ ಎಂ.ವ್ಹಿ. ನಾಗರಾಜ ಅವರು ಉಪಸ್ಥಿತರಿದ್ದು, ನೂತನ ಮುಖ್ಯಮಂತ್ರಿಗಳಿಗೆ ಶುಭ ಕೋರಿದರು.