ಗೋಕಾಕ : ಪ್ರವಾಹದಿಂದಾಗಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆಯ ದುರಸ್ತಿ ಕಾರ್ಯವನ್ನು ಕೈಗೊಂಡು ೧೦ ದಿನಗಳೊಳಗಾಗಿ ಜನಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಲೋಳಸೂರ ಸೇತುವೆಯನ್ನು ವೀಕ್ಷಿಸಿದ ಅಧಿಕಾರಿಗಳ ತಂಡಕ್ಕೆ ಹದಗೆಟ್ಟಿರುವ ಸೇತುವೆ ಹಾಗೂ ರಸ್ತೆ ದುರಸ್ತಿ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ನಿರ್ದೇಶನ ನೀಡಿದ್ದಾರೆ.
ವಾರದ ಹಿಂದೆ ಪ್ರವಾಹ ಹಾಗೂ ಮಳೆಯಿಂದಾಗಿ ಲೋಳಸೂರ ಸೇತುವೆ ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರ ಸ್ಥಗಿತಗೊಂಡಿದೆ. ಘಟಪ್ರಭಾ ನದಿಗೆ ಹಿರಣ್ಯಕೇಶಿ, ಮಾರ್ಕಂಡೇಯ ನದಿ ಮತ್ತು ಬಳ್ಳಾರಿ ನಾಲೆಯಿಂದ ಹಾಗೂ ಹಿಡಕಲ್ ಜಲಾಶಯದಿಂದ ಬಿಡಲಾಗಿದ್ದ ನೀರಿನಿಂದ ಸೇತುವೆ ಮುಳುಗಡೆಗೊಂಡಿದ್ದು, ಕಳೆದ ೪ ದಿನಗಳಿಂದ ಮಳೆಯ ಪ್ರಮಾಣ ತಗ್ಗಿದ್ದರಿಂದ ನೀರಿನ ಮಟ್ಟ ಇಳಿಮುಖವಾಗಿದೆ. ಸೇತುವೆ ಹಾಗೂ ರಸ್ತೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದರಿಂದ ಜನ ಸಂಚಾರಕ್ಕೆ ಇನ್ನೂ ಆಸ್ಪದ ಮಾಡಿಕೊಟ್ಟಿಲ್ಲ. ಪ್ರವಾಹದಿಂದ ಸೇತುವೆ ಹಾಗೂ ರಸ್ತೆ ಸಂಪೂರ್ಣ ಕೊಚ್ಚಿಹೋಗಿದ್ದು, ಕೂಡಲೇ ಇದನ್ನು ದುರಸ್ತಿ ಮಾಡಬೇಕು. ಹತ್ತು ದಿನಗಳ ಒಳಗಾಗಿ ಈ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೀರಿನ ಪ್ರಮಾಣ ಇನ್ನೂ ಕಡಿಮೆಯಾದರೆ ಕೆಳಗಿನ ಸೇತುವೆಯನ್ನು ಜನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವ ಮಾರ್ಗೋಪಾಯವನ್ನು ಸೂಚಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಳಗಿನ ಸೇತುವೆಯ ಮೂಲಕ ಬೈಪಾಸ್ ರಸ್ತೆಯನ್ನು ನಿರ್ಮಿಸಲು ಇದೇ ಸಂದರ್ಭದಲ್ಲಿ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿ.ವಾಯ್. ಪವಾರ, ಚಿಕ್ಕೋಡಿ ಕಾರ್ಯನಿರ್ವಾಹಕ ಅಭಿಯಂತರ ವ್ಹಿ.ಎನ್. ಪಾಟೀಲ, ಗೋಕಾಕ ಎಇಇ ಕೆ.ಪಿ. ನಾಗಾಭರಣ, ಗುತ್ತಿಗೆದಾರ ಬಸವಂತ ದಾಸನವರ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA