ಗೋಕಾಕ ಮೇ 12 : ಗೋಕಾಕ ಶೈಕ್ಷಣಿಕ ವಲಯದಲ್ಲಿ ಬಳಕೆಗೆ ಯೋಗ್ಯವಲ್ಲದ ಶಾಲಾ ಕೊಠಡಿಗಳನ್ನು ಗುರುತಿಸಿ ಅವುಗಳನ್ನು ದುರುಸ್ಥಿ ಮಾಡಿ, ಪ್ರಾಥಮಿಕ ತರಗತಿಗಳಲ್ಲಿಯೂ ಸಹ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರದಂದು ನಗರದಲ್ಲಿ ಪ್ರತಿಭಟನೆ ನಡೆಸಿ ದೈಹಿಕ ಶಿಕ್ಷಣ ಪರಿವೀಕ್ಷಕ ಎಲ್.ಕೆ ತೋರನಗಟ್ಟಿ ಅವರಿಗೆ ಮನವಿ ಅರ್ಪಿಸಿದರು.
ಇದೇ ತಿಂಗಳು 15 ರಂದು ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು, ಸರಕಾರ ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಭರದ ಸಿದ್ಧತೆ ಮಾಡಿಕೊಳ್ಳುವ ಜೊತೆಗೆ ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಹಲವಾರು ರಚನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ನಮ್ಮ ಗೋಕಾಕ ಶೈಕ್ಷಣಿಕ ವಲಯವು ಹೊರತಾಗಿಲ್ಲ. ಆದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸುಮಾರು 959 ಶಾಲಾ ಕೊಠಡಿಗಳು ಬಳಕೆಗೆ ಯೋಗ್ಯವಿಲ್ಲ ಎಂದು ತಿಳಿದು ಬಂದಿದೆ. ಕಾರಣ ಶಾಲಾ ಪ್ರಾರಂಭೋತ್ಸವ ಮುಂಚೆ ಗೋಕಾಕ ವಲಯದಲ್ಲಿರುವ ಬಳಕೆಗೆ ಯೋಗ್ಯವಲ್ಲದ ಶಾಲಾ ಕೊಠಡಿಗಳನ್ನು ಗುರುತಿಸಿ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಂಡು ಅವುಗಳನ್ನು ದುರಸ್ಥಿಗೊಳಿಸಿ ನಂತರ ಅಂತಹ ಕೊಠಡಿಗಳಲ್ಲಿ ತರಗತಿಗಳನ್ನು ಪ್ರಾರಂಭಿಸಿ ಭಯಮುಕ್ತ ವಾತಾವರಣ ನಿರ್ಮಿಸಬೇಕು.
ಕಳೆದ 8 ವರ್ಷಗಳಿಂದ ಗೋಕಾಕ ವಲಯವು ಎಸ್. ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಕೇಂದ್ರಿಕರಸಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಪರೀಕ್ಷೆಗೆ ಸಿದ್ದ ಗೊಳಿಸುತ್ತಿರುವದು ಸಂತೋಷದ ವಿಷಯ. ಅದರಂತೆಯೇ ಪ್ರಾಥಮಿಕ ಹಂತದ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ದಗೊಳಿಸಲು ಸಹ ಹಲವಾರು ಕ್ರೀಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕ ಕಾರ್ಯಕರ್ತರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ , ಸಾದಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ಮಲ್ಲಪ್ಪ ಸಂಪಗಾರ,ರಾಮ ಕುಡ್ಡೆಮ್ಮಿ, ರಾಮ ಕೊಂಗನೊಳಿ, ಕೆಂಪಣ್ಣ ಕಡಕೋಳ, ಜಗದೀಶ್ ರಾಣಾಪ್ಪಗೋಳ, ಪರಸಪ್ಪ ಕೊಂಗನೊಳಿ, ಆನಂದ ಬಿರಡಿ, ಶಿವಾನಂದ ಲಿಂಬೆಣ್ಣವರ, ಸಿದ್ದಾರೂಡ ಪಾಟೀಲ ಸಂತೋಷ ಮದ್ದಿಹಳ್ಳಿ, ಮೊಸಿನ ಮಕಾಂದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು .