ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ. ಜುಲೈ 25 ರಂದು ಸಿಎಂ ಯಡಿಯೂರಪ್ಪ ಶಾಸಕಾಂಗ ಸಭೆಯಲ್ಲಿ ಪ್ರಮುಖ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದೆಲ್ಲಾ ಹೇಳಲಾಗಿತ್ತು.
ಸ್ವಾಮೀಜಿಗಳು ಕೂಡ ಸಿಎಂ ಬೆನ್ನಿಗೆ ನಿಂತು ಬಿ.ಎಸ್.ವೈ. ಬದಲಾವಣೆ ಮಾಡಿದ್ರೆ ಸರಿ ಇರಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಯಡಿಯೂರಪ್ಪನವರಿಗೆ ಬೆಂಬಲ ನೀಡಿದ್ದು, ಈ ರೀತಿ ಅನೇಕ ಬೆಳವಣಿಗೆಗಳ ನಡುವೆ ಬಿಜೆಪಿಯಲ್ಲಿ ತೆರೆಮರೆಯಲ್ಲೇ ಚಟುವಟಿಕೆಗಳು ಗರಿಗೆದರಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ನಡೆಸಲು ಉದ್ದೇಶಿಸಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ರದ್ದು ಮಾಡಲಾಗಿದೆ. ಜುಲೈ 25 ರಂದು ಬೆಳಗ್ಗೆ 11.30 ಕ್ಕೆ ಭೋಜನಕೂಟದ ಹೆಸರಿನಲ್ಲಿ ಶಾಸಕರ ಸಭೆಯನ್ನು ನಿಗದಿಪಡಿಸಲಾಗಿತ್ತು. ಅಂದು ರಾತ್ರಿ ಭೋಜನ ಕೂಟ ನಿಗದಿಯಾಗಿದೆ.
ಬಿಜೆಪಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭೋಜನಕೂಟ ಏರ್ಪಡಿಸಲಾಗಿದೆ. ಆದರೆ, ಶಾಸಕಾಂಗ ಸಭೆಯನ್ನು ರದ್ದು ಮಾಡಲಾಗಿದೆ.
ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಭೋಜನಕೂಟ ಆಯೋಜಿಸಲಾಗಿದೆ. ಮೊದಲು ಬಿಜೆಪಿ ಶಾಸಕಾಂಗ ಸಭೆ ಆಯೋಜಿಸಿದ್ದರೂ, ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಶಾಸಕಾಂಗ ಸಭೆಯನ್ನು ಸಿಎಂ ಯಡಿಯೂರಪ್ಪ ರದ್ದು ಮಾಡಿದ್ದಾರೆ. ಅವರೇ ಸಿಎಂ ಆಗಿ ಮುಂದುವರೆಯುವುದು ಖಚಿತವಾಗಿರುವುದರಿಂದ ಶಾಸಕಾಂಗ ಸಭೆಯನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.
ಬಿಜೆಪಿ ಹೈಕಮಾಂಡ್ ಪರ್ಯಾಯ ನಾಯಕತ್ವ ಹುಡುಕಾಟದಲ್ಲಿದ್ದು, ರಾಜ್ಯದ ರಾಜಕೀಯ ಬೆಳವಣಿಗೆಗಳನ್ನಾಧರಿಸಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಸಿಎಂ ಶಾಸಕಾಂಗ ಸಭೆ ರದ್ದು ಮಾಡಿದ್ದಾರೆ ಎನ್ನಲಾಗಿದೆ.