ಮೂಡಲಗಿ : ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯು ಬಿಡುಗಡೆಗೊಂಡಿದ್ದು, ಟಿಕೇಟ್ ಮೇಲೆ ಕಣ್ಣಿಟ್ಟು ನಿರಾಶೆಗೊಂಡಿರುವ ಆಕಾಂಕ್ಷಿಗಳು ಯಾವ ಕಾರಣಕ್ಕೂ ಪಕ್ಷ ಬಿಡಬಾರದು. ಆತುರದ ನಿರ್ಧಾರವನ್ನು ಕೈಗೊಳ್ಳಬಾರದು. ಇಷ್ಟರಲ್ಲಿಯೇ ಪಕ್ಷದ ವರಿಷ್ಠರು ಅಸಮಧಾನಿತರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಬಸವಂತ ದಾಸನವರ ತೋಟದಲ್ಲಿ ಬುಧವಾರ ಸಂಜೆ ಜರುಗಿದ ಮೂಡಲಗಿ, ನಾಗನೂರ, ಕಲ್ಲೋಳಿ ಮತ್ತು ಅರಭಾವಿ ಪಟ್ಟಣಗಳ ಬಿಜೆಪಿ ಕಾರ್ಯಕರ್ತರು, ಮುಖಂಡರು ಮತ್ತು ಹಿತೈಸಿಗಳ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ಬಿಜೆಪಿಯು ಮತ್ತೊಮ್ಮೆ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ವರಿಷ್ಠರು ಎಲ್ಲ ಸಮುದಾಯಗಳನ್ನು ಕ್ರೋಢಿಕರಿಸಿ ಅಳೆದು ತೂಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಟಿಕೇಟ್ ಆಕಾಂಕ್ಷಿಗಳಾಗಿದ್ದ ಕೆಲವರಿಗೆ ಪಕ್ಷದ ಟಿಕೇಟ್ ನೀಡಿಲ್ಲ. ಇದರಿಂದ ಕೆಲವರಿಗೆ ನಿರಾಸೆಯಾಗಿರಬಹುದು. ಇಷ್ಟರಲ್ಲಿಯೇ ಎಲ್ಲವೂ ಸರಿಯಾಗಲಿದೆ. ಯಾರೂ ಪಕ್ಷ ಬಿಡಬಾರದು. ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವರು ಮನವಿ ಮಾಡಿದರು.
ದೇವರು, ತಾಯಿ-ತಂದೆ ಹಾಗೂ ಜನರ ಆಶೀರ್ವಾದದಿಂದ ಸತತ 6ನೇ ಬಾರಿಗೆ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಒದಗಿಬಂದಿದೆ. ನನ್ನ ಮೇಲೆ ಪ್ರೀತಿ-ವಿಶ್ವಾಸವನ್ನಿಟ್ಟು ಪಕ್ಷದ ಮುಖಂಡರು ಅರಭಾವಿ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ನೀಡಿದ್ದಾರೆ. ಅವರಿಗೆ ಸದಾ ಆಭಾರಿಯಾಗಿದ್ದೇನೆ ಎಂದು ಅವರು ತಿಳಿಸಿದರು.
ಪ್ರತಿ ಬೂತ್ ಮಟ್ಟದಲ್ಲಿ ನಮಗೆ ಮತ ಬೀಳಲು ಕಾರ್ಯಕರ್ತರು ಮನಸಾಪೂರ್ವಕವಾಗಿ ಕೆಲಸ ಮಾಡಬೇಕು. ನಮ್ಮ ಪಕ್ಷದ ಸಾಧನೆಗಳು ಮತ್ತು ಕಳೆದ 20 ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಈ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಬೇಕೆಂದು ಅವರು ಹೇಳಿದರು.
ಮುಹೂರ್ತ ನೋಡಿಕೊಂಡು ನಾಮಪತ್ರದ ದಿನಾಂಕವನ್ನು ನಿಗದಿ ಮಾಡುತ್ತೇವೆ. ಮೊದಲು 5 ಜನರನ್ನು ಕರೆದುಕೊಂಡು ನಾಮಪತ್ರ ಸಲ್ಲಿಸುತ್ತೇನೆ. ನಂತರ ಮತ್ತೊಂದು ಸಲ ಕ್ಷೇತ್ರದ ಪ್ರಮುಖರನ್ನು ಸೇರಿಸಿಕೊಂಡು ಮೂಡಲಗಿಯಲ್ಲಿ ಚುನಾವಣಾಧಿಕಾರಿಗಳಿಗೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಮತ್ತು ಮುಖಂಡ ಬಸವರಾಜ ಮಾಳೇದವರ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸತತ 6ನೇ ಬಾರಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಜ್ಯದಲ್ಲಿಯೇ ಅತೀ ಹೆಚ್ಚಿನ ಲೀಡ್ ನೀಡಿ ರಾಜ್ಯದಲ್ಲಿ ಮತ್ತೊಮ್ಮೆ ರಚನೆಯಾಗಲಿರುವ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಒದಗಿಬರಲಿದೆ. ಜಿಲ್ಲೆಯಲ್ಲಿ ಬಿಜೆಪಿಯಿಂದ ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗಲು ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಬೇಕು. ನಾವೆಲ್ಲರೂ ಅವರ ಪರ ಪ್ರಚಾರ ಕೈಗೊಂಡು ಅತೀ ಹೆಚ್ಚಿನ ಅಂತರದಿಂದ ಗೆಲ್ಲಿಸಿಕೊಡುತ್ತೇವೆ ಎಂದು ಹೇಳಿದರು.
ಪ್ರಭಾಶುಗರ ನಿರ್ದೇಶಕರಾದ ಬಸಗೌಡ ಪಾಟೀಲ, ಕೆಂಚನಗೌಡ ಪಾಟೀಲ, ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಸುಭಾಸ ಕುರಬೇಟ, ಬಿ.ಬಿ. ದಾಸನವರ, ವಿಠ್ಠಲ ಪಾಟೀಲ, ಶಂಕರ ಬಿಲಕುಂದಿ, ಲಾಲಸಾಬ ಸಿದ್ಧಾಪೂರ, ಚಂದ್ರು ಬೆಳಗಲಿ, ರಮೇಶ ಸಣ್ಣಕ್ಕಿ, ಜಯಾನಂದ ಪಾಟೀಲ, ಬಿಜೆಪಿ ಪದಾಧಿಕಾರಿಗಳು, ಮೂಡಲಗಿ, ನಾಗನೂರ, ಕಲ್ಲೋಳಿ ಹಾಗೂ ಅರಭಾವಿ ಪಟ್ಟಣಗಳ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಪರಸಪ್ಪ ಬಬಲಿ ಸ್ವಾಗತಿಸಿ, ನಿರೂಪಿಸಿದರು.