ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರವೂ ಜಿಟಿಜಿಟಿ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಚಿಕ್ಕೋಡಿ ತಾಲ್ಲೂಕಿನ ನದಿ ಜಲಾನಯನ ಪ್ರದೇಶಗಳಲ್ಲಿ 24 ಗಂಟೆಗಳಲ್ಲಿ ಮಳೆಯ ಆರ್ಭಟ ಹೆಚ್ಚಿದೆ. ಕೃಷ್ಣಾ ಮತ್ತು ಉಪನದಿಗಳ ಹರಿವಿನಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದೆ. ರಾಜಾಪುರ ಬ್ಯಾರೇಜ್ನಿಂದ 58ಸಾವಿರ ಕ್ಯುಸೆಕ್ ಮತ್ತು ದೂಧ್ಗಂಗಾ ನದಿಯಿಂದ 19,768 ಕ್ಯುಸೆಕ್ ಸೇರಿ 77,768 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ 6 ಕೆಳಮಟ್ಟದ ಕಿರು ಸೇತುವೆಗಳು ಜಲಾವೃತ ಸ್ಥಿತಿಯಲ್ಲಿಯೇ ಇವೆ. ಗುರುವಾರ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಕ್ಕೋಳ-ಸಿದ್ನಾಳ ಕಿರು ಸೇತುವೆ ಮುಳುಗಡೆಯಾಗಿದೆ.
ಜನರ ಸಂಚಾರಕ್ಕೆ ಪರ್ಯಾಯ ಮಾರ್ಗಗಳಿವೆ.
ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿರುವುದರಿಂದ, ಕೃಷ್ಣಾ ನದಿಗೆ ಬಂದು ಸೇರುವ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ತೀರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ.
ಬೆಳಗಾವಿ ನಗರದಲ್ಲಿ ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ಚರಂಡಿಗಳು ಉಕ್ಕಿ ಹರಿದಿವೆ. ಮಳೆ ನೀರು ರಸ್ತೆಗಳಲ್ಲಿ ಸಂಗ್ರಹಗೊಂಡು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಹಣ್ಣಿನ ಮಾರುಕಟ್ಟೆ ಆವರಣದಲ್ಲಿ ನೀರು ಸಂಗ್ರಹಗೊಂಡಿತ್ತು. ಕೆಲವು ಅಂಗಡಿಗಳಿಗೂ ನುಗ್ಗಿತು. ಇದರಿಂದ ಅಂಗಡಿಕಾರರು ಪರದಾಡಿದರು. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಂಟಮೂರಿ ಘಾಟ್ ಸಮೀಪ ನೀರು ಸಂಗ್ರಹವಾಗಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ, ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಸಿದರು.
ಗೋಕಾಕ,ಚಿಕ್ಕೋಡಿ, ರಾಯಬಾಗ, ಹುಕ್ಕೇರಿ, ಹಿರೇಬಾಗೇವಾಡಿ, ಸವದತ್ತಿ, ಎಂ.ಕೆ. ಹುಬ್ಬಳ್ಳಿ, ಕಿತ್ತೂರು, ರಾಮದುರ್ಗ, ಯರಗಟ್ಟಿಯಲ್ಲೂ ಮಳೆ ಮುಂದುವರಿದಿದೆ. ಖಾನಾಪುರದಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ. ಜಾಂಬೋಟಿ, ಹೆಮ್ಮಡಗಾ, ಗುಂಜಿ, ಕಣಕುಂಬಿ ಭಾಗದ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಪೂರೈಕೆ ನಿಲುಗಡೆಯಾಗಿದೆ. ಖಾನಾಪುರ ತಾಲ್ಲೂಕಿನ ಕಣಕುಂಬಿ, ಅಮಗಾಂವ, ಜಾಮಗಾಂವ ಮಳೆ ಮಾಪನ ಕೇಂದ್ರಗಳಲ್ಲಿ ಗುರುವಾರ 18 ಸೆಂ.ಮೀ. ಮಳೆ ದಾಖಲಾಗಿದೆ. ಉಳಿದೆಡೆ 6ರಿಂದ ಸೆಂ.ಮೀ. ಮಳೆಯಾಗಿದೆ.