ಬೆಳಗಾವಿ: ‘ಪ್ರವಾಹ ಮತ್ತು ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಬೆಳೆ, ಮನೆಗಳು ಹಾಗೂ ರಸ್ತೆ, ಸೇತುವೆ, ಕೆರೆ-ಕಟ್ಟೆ ಮೊದಲಾದ ಮೂಲಸೌಕರ್ಯಗಳು ಸೇರಿದಂತೆ ಒಟ್ಟು ₹ 7,800 ಕೋಟಿ ಹಾನಿಯಾಗಿದೆ’ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಇಲ್ಲಿನ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘21,300 ವಿದ್ಯುತ್ ಕಂಬಗಳು ಹಾಗೂ 5,300 ಟ್ರಾನ್ಸ್‌ಫಾರ್ಮರ್‌ಗಳು ಮುಳುಗಡೆಯಾಗಿವೆ. ನೀರು ಕಡಿಮೆಯಾದ ಬಳಿಕ ಅವುಗಳ ಹಾನಿ ಅಂದಾಜು ಮಾಡಲಾಗುವುದು’ ಎಂದು ಹೇಳಿದರು.
’51 ಕಾಳಜಿ ಕೇಂದ್ರಗಳಲ್ಲಿ 38ಸಾವಿರ ಜನರಿಗೆ ಆಶ್ರಯ ನೀಡಲಾಗಿದೆ. ಜನರಿಗೆ ಊಟೋಪಚಾರ, ಜಾನುವಾರುಗಳಿಗೆ ಮೇವು ಹಾಗೂ ಔಷಧೋಪಚಾರದ ವ್ಯವಸ್ಥೆ ಮಾಡಲಾಗಿದೆ.
ಇನ್ನೂ 8-10 ದಿನಗಳವರೆಗೆ ಕೇಂದ್ರಗಳನ್ನು ಮುಂದುವರಿಸುವಂತೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.
‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಯ 560 ಹಳ್ಳಿ ರಸ್ತೆಗಳು ಹಾಳಾಗಿವೆ. ಆ ಇಲಾಖೆಗೆ ಒಟ್ಟು ₹ 772 ಕೋಟಿ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 300 ಕಿ.ಮೀ. ರಸ್ತೆ, 70 ಸೇತುವೆಗಳು ಹಾಳಾಗಿ ₹ 300 ಹಾನಿಯಾಗಿದೆ. ಮನೆಗಳಿಗೆ ಸಂಬಂಧಿಸಿದ ಹಾನಿ ₹ 150 ಕೋಟಿ ಆಗಿದೆ. ಬೆಳೆ ಹಾನಿಯ ಮೊತ್ತವೇ ₹ 1,430 ಕೋಟಿ ಆಗುತ್ತದೆ ಎಂದು ಅಂದಾಜಿಸಲಾಗಿದೆ. 7,350 ಕೋಳಿಗಳು ಕೊಚ್ಚಿ ಹೋಗಿವೆ’ ಎಂದು ಮಾಹಿತಿ ನೀಡಿದರು.
‘ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರವನ್ನು ಆರ್.ಟಿ.ಜಿ.ಎಸ್. ಮೂಲಕ ಸಂತ್ರಸ್ತರ ಖಾತೆಗಳಿಗೆ ಪಾವತಿಸಲು ಸೂಚಿಸಲಾಗಿದೆ. ಚೆಕ್ ಅಥವಾ ನಗದು ಕೊಡದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಕೆಲವರು ಕೈಚಳಕ ಮಾಡುತ್ತಾರೆ. ಹೀಗಾಗಿ, ಅದಕ್ಕೆ ಅವಕಾಶ ಕೊಡುದಂತೆ ತಿಳಿಸಿದ್ದೇನೆ’ ಎಂದರು.
‘ಜಿಲ್ಲಾಧಿಕಾರಿ ಖಾತೆಯಲ್ಲಿ ₹ 92 ಕೋಟಿ ರೂಪಾಯಿ ಇದೆ. ತುರ್ತು ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ರಸ್ತೆ ಮತ್ತಿತರ ಮೂಲಸೌಕರ್ಯಗಳ ತುರ್ತು ದುರಸ್ತಿಗೆ ₹ 120 ಕೋಟಿ ಬಿಡುಗಡೆಯಾಗಿದೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರವು ರಾಜ್ಯಕ್ಕೆ 2019-20ರಲ್ಲಿ ₹ 1,725, 2020-21ನೇ ಸಾಲಿನಲ್ಲಿ ₹725 ಕೋಟಿಯನ್ನು ಮಾರ್ಗಸೂಚಿ ಪ್ರಕಾರ ಬಿಡುಗಡೆ ಮಾಡಿದೆ. ಈ ಬಾರಿಯ ಹಾನಿ ವರದಿ ಸಲ್ಲಿಸಿದ ಬಳಿಕ ಅಧ್ಯಯನ ತಂಡ ಕಳುಹಿಸಲಿದೆ’ ಎಂದರು.
‘ಪ್ರವಾಹ ಪರಿಹಾರ ವಿತರಣೆಯಲ್ಲಿ ಲೋಪದೋಷ ಎಸಗಿದರೆ ಕೂಡಲೇ ಅಮಾನತು ಮಾಡಬೇಕು. ಅಗತ್ಯಬಿದ್ದರೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.