ಬೆಳಗಾವಿ: ಅನಧಿಕೃತವಾಗಿ ನಿರ್ಮಾಣ ಗೊಂಡಿರುವ ಧಾರ್ಮಿಕ ಕೇಂದ್ರಗಳ ತೆರವಿಗೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೂ ಕಾರ್ಯಾಚರಣೆಗೆ ಮುಂದಾಗಿದ್ದು, ಬೆಳಗಾವಿ ಮಹಾನಗರದಲ್ಲಿರುವ 39 ಧಾರ್ಮಿಕ ಕೇಂದ್ರಗಳ ತೆರವು ಆಗಲಿದೆ.
ಆದರೆ ಇದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ದೇಶಾದ್ಯಂತ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿರುವ ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೂ ಜಿಲ್ಲಾಡಳಿತ ಕೇಂದ್ರಗಳನ್ನು ಗುರುತಿಸಿದೆ. ಅದರಂತೆ ಈಗ ಸದ್ಯ ಒಟ್ಟು 39 ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲು ಸಿದ್ಧತೆ ಮಾಡಿಕೊಂಡಿದೆ. ಧಾರ್ಮಿಕ ಕೇಂದ್ರಗಳು ಇರುವ ಪ್ರದೇಶದ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆ ಕೇಂದ್ರಗಳನ್ನು ತೆರವುಗೊಳಿಸಲಾಗುವುದು. ಸದ್ಯ ಗಣೇಶೋತ್ಸವ ಹಾಗೂ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮಾಡಿರಲಿಲ್ಲ. ಈಗಾಗಲೇ ಎಲ್ಲರಿಗೂ ನೋಟಿಸ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ 46 ಅನಧಿಕೃತ ಕೇಂದ್ರಗಳನ್ನು ಗುರುತಿಸಲಾಗಿದ್ದು, ಈಗಾಗಲೇ 17 ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲಾಗಿದೆ. ಇನ್ನೂ 39 ಕೇಂದ್ರಗಳು ಉಳಿದುಕೊಂಡಿದ್ದು, ಇವುಗಳನ್ನೂ ತೆರವುಗೊಳಿಸಲಾಗುವುದು. ನಿಪ್ಪಾಣಿಯಲ್ಲಿಯ ನಾಲ್ಕು ಕೇಂದ್ರಗಳನ್ನು ಸ್ಥಳಾಂತರ ಮಾಡಲಾಗುವುದು ಎಂದರು.
ಈ ಧಾರ್ಮಿಕ ಕೇಂದ್ರಗಳಿಂದ ಸಂಚಾರ ದಟ್ಟಣೆ ಆಗುತ್ತಿದ್ದರೆ ಅಂಥವುಗಳನ್ನು ತೆರವು ಮಾಡಬೇಕೆಂಬ ಆದೇಶವಿದೆ. ಧಾರ್ಮಿಕ ಕೇಂದ್ರಗಳ ವಿಷಯದಲ್ಲಿ ವಿರೋಧ ಬರುವುದು ಸಹಜ. ಸ್ಥಳೀಯವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ತೆರವು ಮಾಡಲಾಗುವುದು. ಸಣ್ಣ ಪುಟ್ಟ ಕೇಂದ್ರಗಳು ಇರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ವಾರು ಪಟ್ಟಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ನಗರ ಪ್ರದೇಶದಲ್ಲಿ ಕೆಲವರು ತಮ್ಮ ಕಟ್ಟಡ ತೆರವುಗೊಳಿಸಬಾರದು ಎಂದು ಹೇಳಿ ದೇವಸ್ಥಾನಗಳನ್ನು ಕಟ್ಟಿಕೊಂಡಿದ್ದಾರೆ. ಇಂಥವುಗಳನ್ನು ಪಾಲಿಕೆ ಅ ಧಿಕಾರಿಗಳು ಪಟ್ಟಿ ಮಾಡಿಕೊಂಡಿದ್ದಾರೆ. ಅಂಥವುಗಳನ್ನು ತೆರವುಗೊಳಿಸಲಾಗುವುದು ಎಂದರು.