ಬೆಳಗಾವಿ: ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಚಿರತೆ (leopard) ಪ್ರತ್ಯಕ್ಷ ಹಿನ್ನೆಲೆ, 22 ದಿನ ಕಳೆದರು ಸಿಗದ ಚಿರತೆ ಕುರಿತು ವಿಭಿನ್ನ ರೀತಿಯಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮಾಡಲಾಗುತ್ತಿದೆ. ಚಿರತೆ ಪೋಟೊ ಹಾಕಿ ಚಿರತೆ ಹೆಸರಲ್ಲಿ ಆಧಾರ ಕಾರ್ಡ್ ರೆಡಿ ಮಾಡಿ ತಮಾಷೆ ಮಾಡಲಾಗಿದೆ. ಬಿಬತ್ಯಾ ಬೇಲ್ಗಾಂವ್‌ಕರ್ ಅಂತಾ ಚಿರತೆಗೆ ಹೆಸರು ಹಾಕಿ ಆಧಾರ್ ಕಾರ್ಡ್ ವೈರಲ್ ಮಾಡಲಾಗಿದೆ. ಎಷ್ಟು ಬೇಕಾದಷ್ಟು ಪ್ರಯತ್ನ ಮಾಡಿ ನಾನು ಗಣಪತಿ ಹಬ್ಬ ಮುಗಿಸಿಕೊಂಡು ಹೋಗುತ್ತೇನೆ. ಯಾರಪ್ಪಂದೇನ್ ಐತಿ ಬೆಳಗಾವಿ ನಂದೈತಿ ಬೆಳಗಾವಿ ಬಿಟ್ಟು ಹೋಗಲ್ಲ. ನಾನೇ ಆತಂಕವಾದಿನಾ ನನ್ನ ಹಿಡಿಯಲು ಆನೆ, ನಾಯಿ, ಪೊಲೀಸರು ಬಂದಿದ್ದೀರಿ, ಹೀಗೆ ಹಲವು ರೀತಿಯಲ್ಲಿ ಚಿರತೆ ಪೋಟೊ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಮಾಡಲಾಗುತ್ತಿದೆ.
ಪ್ರತಿದಿನವು ಸುಮಾರು 3ಲಕ್ಷ ರೂ. ಖರ್ಚು:
ಕಳೆದ 22 ದಿನಗಳಿಂದ ಆಪರೇಷನ್ ಚಿರತೆ ಕಾರ್ಯಾಚರಣೆ ನಡೆಯುತ್ತಿದ್ದು, ಐದು ದಿನಗಳಿಂದ 160 ಸಿಬ್ಬಂದಿ, ಆನೆ, ಜೆಸಿಬಿಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಕಳೆದ 5 ದಿನಗಳಿಂದ ಪ್ರತಿದಿನವು ಸುಮಾರು 3ಲಕ್ಷದವರೆಗೂ ಖರ್ಚು ಮಾಡಲಾಗುತ್ತಿದ್ದು, ಅರಣ್ಯ ಇಲಾಖೆ ಈವರೆಗೂ ಸುಮಾರು 30 ರಿಂದ 40 ಲಕ್ಷ ಹಣ ಖರ್ಚು ಮಾಡಿದೆ. ನಿತ್ಯವೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತಿದ್ದರು ಚಿರತೆ ಸಿಗುತ್ತಿಲ್ಲ. ಸಿಬ್ಬಂದಿಗೆ ಊಟದ ವ್ಯವಸ್ಥೆ, ಆನೆಗೆ ಆಹಾರದ ವ್ಯವಸ್ಥೆ ಮಾಡಲು ಕೂಡ ಇಲಾಖೆ ಖರ್ಚು ಭರಿಸುತ್ತಿದೆ.