ಬೆಳಗಾವಿ: ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿ ನೀರಾವರಿ ಇಲಾಖೆಯ ಐವರು ಎಂಜಿನಿಯರ್ ಗಳಿಗೆ ಇಲ್ಲಿನ ನ್ಯಾಯಾಲಯ ಶುಕ್ರವಾರ ಶಿಕ್ಷೆ ಪ್ರಕಟ ಮಾಡಿ ತೀರ್ಪು ನೀಡಿದೆ . ನವಿಲುತೀರ್ಥ ಕರ್ನಾಟಕ ನೀರಾವರಿ ನಿಗಮದ ಅಂದಿನ ಸೂಪರಿಂಟೆಂಡಿಂಗ್ ಎಂಜಿನಿಯರ್ ಬಿ . ಪದ್ಮನಾಭ , ಗದಗ ಜಿಲ್ಲೆ ನರಗುಂದ ಕರ್ನಾಟಕ ನೀರಾವರಿ ನಿಗಮದ ಅಂದಿನ ಕಾರ್ಯನಿರ್ವಾಹಕ ಅಭಿಯಂತ ಎಂ.ಬಿ. ಕವದಿ , ನವಿಲುತೀರ್ಥ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಆನಂದ ಕೇಶವರಾವ್ ಮಿರ್ಜಿ , ನವಿಲುತೀರ್ಥ ಕರ್ನಾಟಕ ನೀರಾವರಿ ನಿಗಮದ ಕಿರಿಯ ಅಭಿಯಂತೆ ಶುಭಾ ಮತ್ತು ಸವದತ್ತಿ ತಾಲೂಕಿನ ಶಿರಸಂಗಿ ಮಲಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ಉಪ ವಿಭಾಗದ ಕಿರಿಯ ಅಭಿಯಂತ ಪ್ರಕಾಶ ಹೊಸ್ಮನಿ ಅವರಿಗೆ ನ್ಯಾಯಾಲಯ ಶಿಕ್ಷೆ ಘೋಷಣೆ ಮಾಡಿದೆ .
ಫಿರ್ಯಾದಿದಾರರಾದ ಹನುಮಪ್ಪ ಮಾದರ ಕಗದಾಳ ಸವದತ್ತಿ ಅವರು ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿರುವ ಎಲ್ಲಾ ಮನೆಗಳು ನೀರಿನಿಂದ ಚೌಗು ಉಂಟಾಗಿ ಜನರಿಗೆ ವಾಸ ಮಾಡಲು ಯೋಗ್ಯವಿಲ್ಲದ್ದರಿಂದ ಸರಕಾರ ಭೂಸ್ವಾಧೀನ ಕಾಯ್ದೆ ಯಡಿ ಅವುಗಳನ್ನು ಸ್ವಾಧೀನಪಡಿಸಿ ಪುನರ್ವಸತಿ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮೇಲಿನ ಸರಕಾರಿ ಅಧಿಕಾರಿಗಳು ಲಂಚ ಕೊಟ್ಟವರಿಗೆ ಭೂಸ್ವಾಧೀನ ಕಾಯಿದೆ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಪರಿಹಾರ ಧನ ಮಂಜೂರು ಮಾಡಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಲ್ಲದೆ ಒಳ ಒಪ್ಪಂದ ಮಾಡಿಕೊಂಡು ಭ್ರಷ್ಟಾಚಾರದಿಂದ ತಮಗೆ ಬೇಕಾದವರಿಗೆ ಹೆಚ್ಚಿನ ಪರಿಹಾರ ಮೊತ್ತ ನಿಗದಿ ಪಡಿಸಿ ಅವಾರ್ಡ್ ಮಾಡಿಸಿ ತಮ್ಮ ಕಾರ್ಯವೈಖರಿಯಲ್ಲಿ ಸರಕಾರಕ್ಕೆ ವಿಶ್ವಾಸ ದ್ರೋಹ ಮಾಡಿ ಅಪರಾಧ ಎಸಗಿದ್ದರು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು . ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಇಲ್ಲಿನ 4 ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಪ್ರಭು ಅವರು ಆಪಾದಿತ ಅಧಿಕಾರಿ ಅವರಿಗೆ ಮಾನ್ಯ ನ್ಯಾಯಾಲಯವು ದಿನಾಂಕ 12.8.2022 ರಂದು ತಪ್ಪಿತಸ್ಥರು ಎಂದು ತೀರ್ಪು ನೀಡಿ ಎರಡು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 70,000 / – ರು . ಗಳ ದಂಡ ತುಂಬಲು ಸೂಚಿಸಿದ್ದಲ್ಲದೇ ತಪ್ಪಿದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿರುತ್ತಾರೆ . ಈ ಪ್ರಕರಣದ ತನಿಖೆಯನ್ನು ಅಂದಿನ ಪೊಲೀಸ್ ಉಪಾಧೀಕ್ಷಕರುಗಳಾದ ಎಚ್ . ಟಿ . ಪಾಟೀಲ ಹಾಗೂ ಜೆ.ಆರ್ ಪಾಟೀಲ ಕರ್ನಾಟಕ ಲೋಕಾಯುಕ್ತ , ಬೆಳಗಾವಿ ರವರು ಕೈಗೊಂಡಿದ್ದು , ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು .