ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಗಿಸಲು ಹಾಕಿ, ಕೆಲಸ ಕಳೆದುಕೊಂಡಿದ್ದ ಮಲ್ಲಮ್ಮ ಹಾಗೂ ಸಾಂವಕ್ಕ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ.
ಈ ಇಬ್ಬರೂ ಮಹಿಳೆಯರು ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ದಿನಗೂಲಿ ಆಧಾರದಲ್ಲಿ ನಿಯೋಜನೆಗೊಂಡವರು.ಕಳೆದ ಮಂಗಳವಾರ ಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಗಿಸಲು ಹಾಕಿದ್ದರು. ಇದರ ಚಿತ್ರ ಹಾಗೂ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ, ಅಧಿಕಾರಿಗಳು ಇಬ್ಬರನ್ನೂ ಕೆಲಸದಿಂದ ತೆಗೆದಿದ್ದರು.
ಇದರಿಂದ ಕೆಲವು ಸಾಮಾಜಿಕ ಕಾರ್ಯಕರ್ತರು ಅಧಿಕಾರಿಗಳ ಮೇಲೆ ಹರಿಹಾಯ್ದರು. ಎಚ್ಚೆತ್ತುಕೊಂಡ ಅಧಿಕಾರಿಗಳು ಇಬ್ಬರನ್ನೂ ಶುಕ್ರವಾರದಿಂದ ಕೆಲಸಕ್ಕೆ ಸೇರಿಸಿಕೊಂಡರು.
‘ಮಲ್ಲಮ್ಮ ಹಾಗೂ ಸಾಂವಕ್ಕ ತಿಳಿಯದೇ ತಪ್ಪು ಮಾಡಿದ್ದಾರೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಲು ತಿಳಿಸಿ, ಮತ್ತೆ ಕೆಲಸ ಕೊಡಲಾಗಿದೆ’ ಎಂದು ಲೋಕೋಪಯೊಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಲ್. ಭೀಮನಾಯಕ ತಿಳಿಸಿದರು.
CKNEWSKANNADA / BRASTACHARDARSHAN CK NEWS KANNADA