ಗೋಕಾಕ: ಕೊರೋನಾ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಹಾಯ ಹಸ್ತ ನೀಡುವುದರೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು ಅವರ ಕಷ್ಟ ನೀಗಿಸುವುದರಲ್ಲಿ ನಿರತರಾಗಿದ್ದಾರೆಂದು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಹೇಳಿದರು.
ಸೋಮವಾರದಂದು ನಗರದ ಮುಪ್ಪಯ್ಯನಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯವರು ಹಮ್ಮಿಕೊಂಡ ಗೋಕಾಕ ತಾಲೂಕಿನ ಕೊರೋನಾ ಸಂಕಷ್ಟದಲ್ಲಿರುವ 500 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಜನತೆ ಧೈರ್ಯದಿಂದ ಕೊರೋನಾ ಸಂಕಷ್ಟದ ಸಂದರ್ಭವನ್ನು ಎದುರಿಸಬೇಕು. ನಿಮ್ಮೊಂದಿಗೆ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು ಇದ್ದಾರೆ. ಅವರು ಧಾರವಾಡ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬರುವ 36 ಲಕ್ಷ ರೂಗಳ 6 ಹೈಪ್ಲೂ ಮಶೀನ್, 39 ಲಕ್ಷ ರೂಗಳ 65 ಆಮ್ಲಜನಕ ಸಾಂದ್ರಕ, 65 ಲಕ್ಷ ರೂಗಳ 12 ವೆಂಟಿಲೆಟರ್, 14 ಟನ್ ಆಕ್ಸಿಜನ್, 500 ಜನರಿಗೆ ಮೆಡಿಸಿನ್ ಕಿಟ್ ಸೇರಿದಂತೆ 5 ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದೆ. ನಾಡಿನ ಜನತೆ ಧರ್ಮಾಧಿಕಾರಿಗಳು ಕೊರೋನಾ ಸೊಂಕಿತರಿಗೆ ಧೈರ್ಯವನ್ನು ತುಂಬುವುದರ ಜೊತೆಗೆ ಅವರ ಕುಟುಂಬಕ್ಕೂ ನೆರವಾಗುತ್ತಿದ್ದಾರೆ.
ನಾವೆಲ್ಲರೂ ಅವರೊಂದಿಗೆ ಕೈ ಜೋಡಿಸಿ ಕೊರೋನಾ ಹೊಡೆದಟ್ಟಲು ಪ್ರಯತ್ನಿಸೋಣವೆಂದು ಹೇಳಿದರು.
ನಗರಸಭೆ ಸದಸ್ಯೆ ಲಕ್ಷ್ಮೀ ದೇಶನೂರ ಮಾತನಾಡಿ, ಕೊರೋನಾ ಮಹಾಮಾರಿಯನ್ನು ತಡೆಯಲು ಪ್ರತಿಯೊಬ್ಬರು ವ್ಯಾಕ್ಸಿನ್ ಪಡೆಯಬೇಕು. ಇದರ ಬಗ್ಗೆ ಯಾರು ಉದಾಸಿನರಾಗಬಾರದು ವ್ಯಾಕ್ಸಿನ್ ಪಡೆಯುವುದು ನಮ್ಮೆಲ್ಲರ ಕರ್ತವ್ಯವೆಂದು ತಿಳಿದು, ತಮ್ಮ-ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಿ, ಸರ್ಕಾರ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಸ್ಥಳೀಯ ಆಡಳಿತ ಸೇರಿದಂತೆ ಶಾಸಕರು ನಿಮ್ಮೊಂದಿಗೆ ಇದ್ದಾರೆ. ಯಾರೂ ಭಯಪಡದೇ ಕೊರೋನಾ ಎದುರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಯೋಜನಾಧಿಕಾರಿ ಮಮತಾ ನಾಯಿಕ, ಮುಖಂಡ ಬಸವರಾಜ ದೇಶನೂರ, ಸಂಸ್ಥೆಯ ಸುರೇಖಾ ಹಾಗೂ ಚನ್ನಗೌಡ ಇದ್ದರು.