ಶಿವಮೊಗ್ಗ, : ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಸೊರಬ ತಾಲೂಕಿನ ಯಲವಾಳ ಗ್ರಾಮದ ತಮ್ಮ ಜಮೀನಿನಲ್ಲಿ ರೈತ ಬೆಳೆ ಸಮೀಕ್ಷೆ ಆ್ಯಪ್ ಪ್ರಾತ್ಯಕ್ಷಿಕೆ ನಡೆಸಿದರು. ಜಮೀನಿನಲ್ಲಿ ನಿಂತು ಬೆಳೆ ವಿವರ ಸರ್ವೆ ನಂಬರ್ ಸೇರಿದಂತೆ ಜಮೀನಿನಲ್ಲಿನ ತಮ್ಮ ಭಾವಚಿತ್ರವನ್ನು ಆ್ಯಪ್‌ನಲ್ಲಿ ಅಪ್ಲೋಡ್ ಮಾಡಿ ನೆರೆದಿದ್ದ ರೈತರಿಗೆ ಮಾದರಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಪಾಟೀಲ ರೈತನ ಬೆಳೆ ರೈತನ ಹಕ್ಕಾಗಿದೆ. ಇದು ದೇಶದಲ್ಲಿ ಮೊದಲ ಬಾರಿಗೆ ರೈತನೇ ಸ್ವತಃ ತನ್ನ ಹೊಲದ ಸಮೀಕ್ಷೆ ನಡೆಸಿ ತಾನೇ ಪ್ರಮಾಣಪತ್ರ ನೀಡುವಂತಹ ಮಹತ್ವದ ಆ್ಯಪ್ ಆಗಿದ್ದು, ರೈತರು ಆ್ಯಪ್ ಸಮೀಕ್ಷೆ ಬಗ್ಗೆ ಹೆಚ್ಚೆಚ್ಚು ಒಲವು ತೋರುತ್ತಿದ್ದಾರೆ. ಈ ಬಾರಿಯ ರೈತ ಬೆಳೆ ಸಮೀಕ್ಷೆ ರೈತರ ಬೆಳೆಯ ಉತ್ಸವವೇ ಆಗಿದೆ. ಸಮೀಕ್ಷೆಗೆ ದೊರೆತಿರುವ ಅಭೂತಪೂರ್ವ ಸ್ಪಂದನೆ ಕಂಡು ಆಗಸ್ಟ್ 24 ರವರೆಗೆ ನಿಗದಿಗೊಳಿಸಲಾಗಿದ್ದ ರೈತ ಬೆಳೆ ಆ್ಯಪ್ ಸಮೀಕ್ಷೆಯ ಅವಧಿಯನ್ನು ಇನ್ನು ಸ್ವಲ್ಪದಿನಗಳ ಕಾಲ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರವು ಸಹ ರಾಜ್ಯದ ಈ ಕ್ರಾಂತಿಕಾರಕ ಹಾಗೂ ರೈತೋಪಯೋಗಿ ಆ್ಯಪ್ ಸಮೀಕ್ಷೆಯಿಂದ ಪ್ರೇರಿತಗೊಂಡಿದ್ದು, ದೇಶದ ಇತರೆ ಜಿಲ್ಲೆಗಳಲ್ಲಿಯೂ ಸಹ ಜಾರಿಗೊಳಿಸಲು ಮುಂದಾಗಿದೆ ಎಂದರು.
CKNEWSKANNADA / BRASTACHARDARSHAN CK NEWS KANNADA