ಬೆಳಗಾವಿ: ‘ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ಮುಂದಾಲೋಚನೆಯಿಂದ ನಿರ್ಮಿಸಿರುವ ಇಲ್ಲಿನ ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಶಕ್ತಿ ಕೇಂದ್ರ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ಕೈಗೊಳ್ಳಬೇಕು’ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಮಟ್ಟದ ಪ್ರಮುಖ ಕಚೇರಿಗಳು ಇಲ್ಲಿಗೆ ಬಂದರೆ ಹಾಗೂ ವಿಧಾನಮಂಡಲ ಅಧಿವೇಶನವನ್ನು ನಿಯಮಿತವಾಗಿ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಮಾತ್ರ ಈ ಭಾಗದ ಸಮಗ್ರ ಅಭಿವೃದ್ಧಿಯ ಕನಸು ಸಾಕಾರಗೊಳ್ಳಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯು ರಾಜಕೀಯ ಇಚ್ಛಾಶಕ್ತಿಯಿಂದ ದಿಟ್ಟ ಹೆಜ್ಜೆ ಇಡುತ್ತಾರೆಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಅದನ್ನು ಹುಸಿಗೊಳಿಸಬಾರದು’ ಎಂದರು.
‘ಕಾರ್ಯದರ್ಶಿಗಳು ಮತ್ತು ಎಲ್ಲ ಇಲಾಖೆಗಳ ನಿರ್ದೇಶಕರ ಕಾರ್ಯಾಲಯಗಳು ಇಲ್ಲಿಂದ ಕಾರ್ಯನಿರ್ವಹಿಸಿದಾಗ ಮಾತ್ರ ನೈಜ ಆಡಳಿತಾತ್ಮಕ ಶಕ್ತಿ ಕೇಂದ್ರ ಆಗುತ್ತದೆ. ಆದರೆ, ವಾಸ್ತವವಾಗಿ ಈ ಭವ್ಯವಾದ ಸೌಧ ಪ್ರೇಕ್ಷಕರ ಆಕರ್ಷಣೀಯ ಕೇಂದ್ರವಷ್ಟೇ ಆಗಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಬೇಕಾಗಿದೆ’ ಎಂದು ತಿಳಿಸಿದರು.
‘ಈ ವಿಷಯವಾಗಿ ಇಲ್ಲಿನ ಜನಪ್ರತಿನಿಧಿಗಳು ಮುಖ್ಯಮಂತ್ರಿಯ ಗಮನಸೆಳೆಯಬೇಕು. ಹಲವು ವರ್ಷಗಳಿಂದ ರಾಜ್ಯವನ್ನು ಕಾಡುತ್ತಿರುವ ಗಡಿ ಸಮಸ್ಯೆ ಹೋಗಲಾಡಿಸಲು ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಕೂಡಲೇ ಘೋಷಿಸಬೇಕು’ ಎಂದು ಆಗ್ರಹಿಸಿದರು.
‘ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಗಳ ಕುರಿತು ಧ್ವನಿ ಎತ್ತುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿರುವುದು ವಿಷಾದನೀಯ’ ಎಂದರು.
‘ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರಿದಂದ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದಲ್ಲಿ, ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲೇ ಸುವರ್ಣ ವಿಧಾನಸೌಧದ ಮುಂದೆ ಸತ್ಯಾಗ್ರಹ ನಡೆಸುವ ಮೂಲಕ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.
ರೈತ ಮುಖಂಡ ಕಲ್ಯಾಣರಾವ್ ಮುಚ್ಚಳಂಬಿ, ವಕೀಲ ಎಂ.ಟಿ. ಪಾಟೀಲ, ಮುಖಂಡರಾದ ಅಜಯ ಮದಿಹಳ್ಳಿ, ಪ್ರವೀಣ ಪಾಟೀಲ, ರಮೇಶ ಧವಳಿ, ಮಹಾಂತೇಶ ಗೋಕಾಕ ಪಾಲ್ಗೊಂಡಿದ್ದರು.