ಗೋಕಾಕ : ರಾಷ್ಟವ್ಯಾಪ್ತಿ ಎಕೀಕೃತ ಕೇಂದ್ರ ಶಿಕ್ಷಣ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಕಾರ್ಯರೂಪಕ್ಕೆ ತರಲು ಕ್ರಮಕೈಗೊಳ್ಳುತ್ತಿರುವ ಕೇಂದ್ರ ಸರಕಾರದ ಶಿಕ್ಷಣ ನೀತಿಗೆ ಪೂರಕವಾಗಿಯೇ ಕೇಂದ್ರ ಸರಕಾರ ಕೇಂದ್ರೀಯ ಶಿಕ್ಷಣ ಮಂಡಳಿಯಿಂದ ನಡೆಯಲಿರುವ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಯ ೧೨ ನೇ ತರಗತಿಯ ಪರಿಕ್ಷೆಗಳನ್ನು ರದ್ದುಪಡಿಸಿರುವ ನಿರ್ಣಯಕ್ಕೆ ಪೂರಕವಾಗಿಯೇ ಕರ್ನಾಟಕ ರಾಜ್ಯದಲ್ಲಿ ನಡೆಯಬೇಕಾಗಿರುವ ಪಿ.ಯು.ಸಿ. ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದು ಪಡಿಸಬೇಕೆಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಮತ್ತು ರಾಜಕೀಯ ಮುಖಂಡ ಅಶೋಕ ಪೂಜಾರಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ವಿಷಯ ಕುರಿತು ಪತ್ರಿಕಾ ಪ್ರಟಕಣೆ ನೀಡಿರುವ ಅವರು ಈಗಾಗಲೇ ಕರೋನಾ ಎರಡನೇ ಅಲೆಯ ಹೊಡೆತಕ್ಕೆ ಸಿಕ್ಕಿರುವ ಬಹುತೇಕ ರಾಜ್ಯಗಳು ತಮ್ಮಲ್ಲಿ ನಡೆಯಬೇಕಾಗಿದ್ದ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಪಡಿಸುವ ನಿರ್ಣಯ ಕೈಗೊಂಡಿದ್ದಾರೆ. ಈಗಾಗಲೇ ಕಳೆದ ಮತ್ತು ಈ ಸಾಲೀನ ಅವಧಿಯಲ್ಲಿ ಶಾಲಾ ಕಾಲೇಜುಗಳು ನಡೆದಿರುವ ದಿನಗಳು ಅತ್ಯಲ್ಪ. ಆದರೆ ಬಹುತೇಕ ಗ್ರಾಮೀಣ ಭಾಗದ ಮತ್ತು ನಗರ ಪ್ರದೇಶದ ಬಡವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣ ಬೋಧನೆಗೆ ಪೂರಕವಾಗಿ ಹೊಂದಿರಬೇಕಾದಂತಹ ಸೌಲಭ್ಯಗಳ ಕೊರತೆಯಿಂದಾಗಿ ಪರಿಪೂರ್ಣ ಶಿಕ್ಷಣವನ್ನು ಪಡೆಯಲಾಗಿಲ್ಲ. ಕರೋನಾ ಅಲೆಯ ಭೀಕರತೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಪಾಲಕರು ವಿದ್ಯಾರ್ಜನೆ ಮತ್ತು ಪರೀಕ್ಷೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಜೀವವನ್ನು ಪಣಕ್ಕಿಡುವದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಪರೀಕ್ಷೆ ಕುರಿತು ಇರುವ ಗೊಂದಲಗಳಿಂದಾಗಿ ಮಾನಸಿಕವಾಗಿ ಕ್ಲಿಷ್ಟಕರ ಪರಿಸ್ಥಿತಿಗೆ ಸಿಲುಕಿರುವ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಮತ್ತಷ್ಟು ಮಾನಸಿಕ ಕ್ಲೇಷಕ್ಕೆ ಸಿಲುಕಿಸುವದು ಸೂಕ್ತವಲ್ಲ. ಪಿಯುಸಿ ನಂತರದ ವೃತ್ತಿಪರ ಮತ್ತು ಇನ್ನಿತರ ಪದವಿ ಕೋರ್ಸ್ಗಳಿಗೆ ಪಿಯುಸಿ ತೆರ್ಗಡೆಯ ನಂತರ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯಲ್ಲಿ ಪಡೆಯುವ ಅಂಕಗಳೇ ಆಧಾರವಾಗಿರುವದರಿಂದ ಜಾಣ ವಿಧ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗುವದಿಲ್ಲ. ಮೇಲಾಗಿ ಈಗ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಕೇಂದ್ರ ಸರಕಾರದಿಂದಲೇ ನಡೆಯುವ ರಾಷ್ಟ್ರಿಯ ಏಕಿಕೃತ ಪ್ರವೇಶ ಪರೀಕ್ಷೆಗಳಾಗಿರುವದರಿಂದ ಯಾವುದೇ ತರಹದ ಗೊಂದಲವೂ ನಿರ್ಮಾಣವಾಗುವದಿಲ್ಲವೆಂದು ತಿಳಿಸಿದ್ದಾರೆ.
ಇದೇ ಕಾರಣದಿಂದ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ರಾಜ್ಯ ಸರಕಾರ ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯದಲ್ಲಿ ನಡೆಯುವ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.