ಗೋಕಾಕ: ದುಷ್ಟ ಶಕ್ತಿಯ ಸಂಹಾರದ ಪ್ರತೀಕವಾಗಿ ವಿಜಯ ದಶಮಿಯನ್ನು ಆಚರಿಸುತ್ತಿದ್ದು, ನಮ್ಮಲ್ಲಿರುವ ದುಷ್ಟ ಆಲೋಚನೆ ಹಾಗೂ ದುಶ್ಚಟಗಳಿಂದ ದೂರವಿದ್ದು, ದೇವಿಯ ಕೃಪೆಗೆ ಪಾತ್ರರಾಗೋಣ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.
ಶುಕ್ರವಾರದಂದು ನಗರದ ಮರಾಠಗಲ್ಲಿಯಲ್ಲಿ ನವರಾತ್ರಿ ಉತ್ಸವ ಮಂಡಳಿಯವರು ಆಯೋಜಿಸಿದ್ದ ನವರಾತ್ರಿ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಅವುಗಳು ಪ್ರೀತಿ ವಿಶ್ವಾಸದ ಸಂದೇಶವನ್ನು ನಮಗೆ ನೀಡುತ್ತವೆ. ಇವುಗಳ ಆಚರಣೆಯಿಂದ ನಾವೆಲ್ಲರೂ ದೇವರ ಕೃಪೆಗೆ ಪಾತ್ರರಾಗಿ ಶಾಂತಿಯುತ ಜೀವನ ನಡೆಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಜ್ಯೋತಿಭಾ ಸುಭಂಜಿ ಅವರು ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಮುಖಂಡರಾದ ಪರಶುರಾಮ ಭಗತ, ಭೀಮಶಿ ಹುಣಶ್ಯಾಳ, ರಾಮು ಪಾಟೀಲ, ಆನಂದ ಕೊಣ್ಣೂರ, ಗಣಪತಿ ಭಟ್ಟ, ಎಸ್ ಕೆ ಘೋರ್ಪಡೆ, ಸೇರಿದಂತೆ ಅನೇಕರು ಇದ್ದರು.