ಗೋಕಾಕ : ತಾಲ್ಲೂಕಿನ ಧುಪದಾಳ ಗ್ರಾಮದಲ್ಲಿ ನೆಲಸಮ ಮಾಡಿದ ಬಡವರ ಮನೆಗಳನ್ನು ಸರ್ಕಾರದಿಂದ ಶೀಘ್ರದಲ್ಲಿ ಮರು ನಿರ್ಮಾಣ ಮಾಡಬೇಕು ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧುಪದಾಳ( ನವಿಲಮಾಳ) ಸಮೀಪದಲ್ಲಿರುವ ಸರ್ವೆ ನಂ.173/1ರಲ್ಲಿ 140 ಎಕರೆ ಜಮೀನು ಪಾಳು ಬಿದ್ದಿದೆ. ಈ ಜಾಗದಲ್ಲಿ ವಸತಿ ರಹಿತ ಬಡವರು, ಕೂಲಿ ಕಾರ್ಮಿಕರು , ಗೋಕಾಕ್ ಮಿಲ್ ಕಾರ್ಮಿಕರು ಸುಮಾರು 8 ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದಾರೆ.
ಇಲ್ಲಿ ನಿರ್ಮಾಣವಾದ ಮನೆಗಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ವಿದ್ಯುತ್ , ನೀರು ಸೇರಿ ಎಲ್ಲ ಸೌಕರ್ಯ ಕಲ್ಪಿಸಿದ್ದಾರೆ. ಆದರೆ ಅವುಗಳನ್ನು ಸಕ್ರಮ ಮಾಡಿಕೊಡದೆ, ಸುಮಾರು 32 ಮನೆಗಳನ್ನು ತಹಶೀಲ್ದಾರ್ ತೆರವುಗೊಳಿಸಿದ್ದಾರೆ. ಈ ಕ್ರಮ ಸರಿಯಲ್ಲ. ಆದಷ್ಟು ಬೇಗ ತೆರವುಗೊಳಿಸಿದ ಮನೆಗಳನ್ನು ನಿರ್ಮಿಸಿ, ಸಕ್ರಮ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಗೋಕಾಕ ಮಿಲ್ ಪ್ರದೇಶದಲ್ಲಿ 350 ಎಕರೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಅಲ್ಲಿ 20×30 ನಿವೇಶನಗಳನ್ನು ಮಾಡಿ ಬಡವರಿಗೆ, ಕೂಲಿ ಕಾರ್ಮಿಕರು, ಮನೆ ಇಲ್ಲದವರಿಗೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಆದರೂ ಸಹ ಇಲ್ಲಿಯವರೆಗೂ ನೀಡಿಲ್ಲ. ಆದಷ್ಟು ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದಾರೆ.
ಮುಖಂಡರುಗಳಾದ ಸುರೇಶ ಮರಲಿಂಗನವರ, ಶಬ್ಬಿರ ಅತ್ತಾರ, ದಸ್ತಗೀರ ಪೈಲವಾನ, ಸಿ.ಬಿ.ಗಿಡನ್ನವರ, ಪ್ರಕಾಶ ಬಾಗೋಜಿ, ಚನ್ನಬಸಪ್ಪ ರುದ್ರಾಪೂರ ಉಪಸ್ಥಿತರಿದ್ದರು.