ನವದೆಹಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಇವತ್ತು ಮಹತ್ವದ ದಿನ. ಎಐಸಿಸಿ ಅಧ್ಯಕ್ಷರ ಬದಲಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಾಯಕತ್ವ ಬದಲಾವಣೆಗೆ ಪತ್ರ ಬರೆದು ಕಾಂಗ್ರೆಸ್ ನಾಯಕರೇ ಆಗ್ರಹಿಸಿದ್ದರು. ಮತ್ತೊಂದೆಡೆ ಬಜೆಪಿಯ ಎದುರು ರಾಜಕೀಯ ಮಾಡಲು ಯುವ ನಾಯಕತ್ವಕ್ಕೆ ಅವಕಾಶ ಒಡಬೇಕು ಎಂಬ ಒತ್ತಡಗಳು ಪಕ್ಷದಲ್ಲಿ ಹೆಚ್ಚಾಗಿವೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಇದೇ ಸಂದರ್ಭದಲ್ಲಿ ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿಯೇ ಹರಿದಾಡಿತ್ತು. ಆಗ ಟ್ವೀಟ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ್ದರು.
ಈ ಮಧ್ಯೆ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ವರ್ಚುವಲ್ ಮೀಟಿಂಗ್ ಮೂಲಕ ನಡೆಯುತ್ತಿದೆ.
ಖರ್ಗೆ ಅತ್ತ ಹೈಕಮಾಂಡ್ ಚಿತ್ತ
ಪಕ್ಷ ಹಾಗೂ ಗಾಂಧಿ ಕುಟುಂಬ ನಿಷ್ಠೆ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಸೋನಿಯಾ ಗಾಂಧಿ ಕೂಡ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಮಾತಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.
ಪರೋಕ್ಷ ವಿರೋಧ?
ಕಾಂಗ್ರೆಸ್ ನಾಯಕತ್ವ ಬದಲಾವಣೆ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರತ್ತ ಹೈಕಮಾಂಡ್ ಒಲವು ಹೊಂದಿದೆ ಎಂಬ ಚರ್ಚೆಯ ಬೆನ್ನಲ್ಲೆ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು. ಟ್ವೀಟ್‌ನಲ್ಲಿ ಪರೋಕ್ಷವಾಗಿ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷಸ್ಥಾನ ಕೊಡುವುದನ್ನು ವಿರೋಧಿಸಿದ್ದರು. ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿ ಅವರು ಎಐಸಿಸಿ ಮುಂದಿನ ಅಧ್ಯಕ್ಷರಾಗಬೇಕು. ಅವರು ನಾಯಕತ್ವ ವಹಿಸಿಕೊಳ್ಳುವುದರಿಂದ ಪಕ್ಷಕ್ಕೆ ಹೊಸ ಚೈತನ್ಯ, ಕಾರ್ಯಕರ್ತರಲ್ಲಿ ಹುರುಪು ಹಾಗೂ ದೇಶದ ಜನರಲ್ಲಿ ಭರವಸೆ ಮೂಡಲಿದೆ.
ಇದು ಕೋಟ್ಯಂತರ ಕಾರ್ಯಕರ್ತರ ಆಶಯವೂ ಕೂಡ ಎಂದು ಆಗ್ರಹಿಸಿದ್ದರು. ಆ ಮೂಲಕ ಮಲ್ಲಿಕಾರ್ಜುನ್ ಖರ್ಗೆ ಅವರು ಎಐಇಸಿಸಿ ಅಧ್ಯಕ್ಷರಾಗುವುದು ಬೇಡ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಮಲ್ಲಿಕಾರ್ಜುನ್ ಖರ್ಗೆ ಅವರು ಟ್ವೀಟ್‌ನಲ್ಲೆ ಪರೋಕ್ಷ ತಿರುಗೇಟು ಕೊಟ್ಟಿದ್ದಾರೆ.
ಖರ್ಗೆ ತಿರುಗೇಟು
ರಾಹುಲ್ ಗಾಂಧಿ ಅವರನ್ನು ಬೆಂಬಲಿಸುವ ಮೂಲಕ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಲು ವಿರೋಧ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರಿಗೆ ಮಲ್ಲಿಕಾರ್ಜುನ್ ಖರ್ಗೆ ಅವರು ಟ್ವೀಟ್‌ನಲ್ಲಿಯೇ ತಿರುಗೇಟು ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಬದಲಿಗೆ ಸೋನಿಯಾ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಆಗ್ರಹಿಸಿದ್ದಾರೆ.
ನೆಹರೂ ಗಾಂಧಿ ಕುಟುಂಬದಿಂದ ಪಕ್ಷ, ದೇಶಕ್ಕಾಗಿ ಒಂದು ಶತಮಾನದ ತ್ಯಾಗ ಮತ್ತು ಕೊಡುಗೆಯಿದೆ. ಸೋನಿಯಾ ಗಾಂಧಿ ಅವರಿಗೆ ವೈಯಕ್ತಿಕವಾಗಿ ಸಾಕಷ್ಟು ತೊಂದರೆಗಳಿವೆ. ಆದರೂ ಆದರೂ ಅವರು ಪಕ್ಷದ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ದೇಶದ ಹಿತಾಸಕ್ತಿಗೆ ಕೆಲಸ ಅವರ ಕೊಡುಗೆ ಅಪಾರವಾಗಿದೆ. 2004 ಹಾಗೂ 2009ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸೋನಿಯಾ ಗಾಂಧಿರವರ ಶ್ರಮ ಮರೆಯಲಾಗದು. ಹೀಗಾಗಿ ಈಗ ಪಕ್ಷದ ಎಲ್ಲಾ ನಾಯಕರು ಅವರ ಜೊತೆಗೆ ನಿಲ್ಲಬೇಕು. ಅಧ್ಯಕ್ಷರಾಗಿ ಅವರೇ ಮುಂದುವರಿಯಬೇಕು. ಅವರು ಒಪ್ಪದಿದ್ದರೆ ರಾಹುಲ್ ಗಾಂಧಿ ನಾಯಕತ್ವ ವಹಿಸಿಕೊಳ್ಳಬೇಕು ಎಂದಿದ್ದಾರೆ.