Breaking News

ಲಂಚ ಪಡೆಯುವ ಪ್ರಕರಣದಲ್ಲಿ ಕಂದಾಯ ಇಲಾಖೆ ನಂ 1.


ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಘಟಕದಲ್ಲಿ ದಾಖಲಾಗಿರುವ ಇದುವರೆಗಿನ ಒಟ್ಟಾರೆ ಲಂಚ ಪಡೆದ ಪ್ರಕರಣಗಳ ಪೈಕಿ ಸರ್ಕಾರದ ವಿವಿಧ ಇಲಾಖೆಗಳಿಗೆ ಮಾತೃ ಇಲಾಖೆ ಎನಿಸಿಕೊಂಡಿರುವ ಕಂದಾಯ ಇಲಾಖೆ ಮೊದಲ ಸ್ಥಾನದಲ್ಲಿದೆ.

ಹೌದು, ಜಿಲ್ಲೆಯಲ್ಲಿ 2016 ರಿಂದ ತನ್ನ ಕಾರ್ಯಾರಂಭ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಲ್ಲಿ ದಾಖಲಾಗಿರುವ ಅಂಕಿ, ಅಂಶಗಳೇ ಜಿಲ್ಲೆಯಲ್ಲಿ ಇತರೇ ಸರ್ಕಾರಿ ಇಲಾಖೆಗಳಗಿಂತ ಸಾರ್ವಜನಿಕ ಸಂಪರ್ಕ ಹೆಚ್ಚಿರುವ ಕಂದಾಯ ಇಲಾಖೆಯಲ್ಲಿ ಮೀತಿ ಮೀರಿದ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಬಹಿರಂಗೊಳಿಸಿದೆ.

ಕಂದಾಯ ಇಲಾಖೆಯದ್ದೇ 18 ಪ್ರಕರಣ

ಜಿಲ್ಲೆಯಲ್ಲಿ 2016 ರಿಂದ 2021ರ ಜುಲೈ ಅಂತ್ಯದವರೆಗೆ ಬರೋಬ್ಬರಿ 50 ಲಂಚ ಪಡೆದ ಪ್ರಕರಣಗಳು ಎಸಿಬಿಯಲ್ಲಿ ದಾಖಲಾಗಿವೆ.

ಅವುಗಳ ಪೈಕಿ ಜಿಲ್ಲೆಯ ಕಂದಾಯ ಇಲಾಖೆಯದೇ ಒಟ್ಟು 18 ಪ್ರಕರಣಗಳೂ ದಾಖಲಾಗುವ ಮೂಲಕ ಕಂದಾಯ ಇಲಾಖೆ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ 6 ಲಂಚ ಪ್ರಕರಣಗಳು ದಾಖಲಾಗಿರುವ ಜಿಲ್ಲೆಯ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಇದೆ. 3ನೇ ಸ್ಥಾನದಲ್ಲಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು 4 ಲಂಚದ ಪ್ರಕರಣಗಳು ದಾಖಲಾಗಿವೆ.

ಉಳಿದಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ 1, ಸಾರಿಗೆ ಇಲಾಖೆಯಲ್ಲಿ 2, ಅರಣ್ಯ ಇಲಾಖೆ 1, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 1, ಲೋಕೋಪಯೋಗಿ ಇಲಾಖೆ 1, ನಗರಾಭಿವೃದ್ದಿ, ಇಂಧನ ಇಲಾಖೆ ಹಾಗೂ ಒಳಾಡಳಿತದಲ್ಲಿ ತಲಾ 3, ಕೃಷಿ, ಆರ್ಥಿಕ, ಜಲ ಸಂಪನ್ನೂಲ, ರೇಷ್ಮೆ ಹಾಗೂ ವಸತಿ ಇಲಾಖೆಗಳಲ್ಲಿ ತಲಾ 1 ಪ್ರಕರಣ ಸೇರಿ ಒಟ್ಟು 6 ವರ್ಷದಲ್ಲಿ 50 ಲಂಚ ಪಡೆದ ಪ್ರಕರಣಗಳು ಭ್ರಷ್ಟಾಚಾರ ನಿಗ್ರಹ ದಳ ಘಟಕದಲ್ಲಿ ದಾಖಲಾಗಿವೆ.

ಲಂಚ ನೀಡಿದರೆ ಸೌಲಭ್ಯ

ಕಂದಾಯ ಇಲಾಖೆಯಲ್ಲಿ ಖಾತೆ, ಪೌತಿ ಖಾತೆ, ಪಿಂಚಣಿ ಮತ್ತಿತರ ಸಾಮಾಜಿಕ ಭದ್ರತಾ ಯೋಜನೆಗಳ ಮಂಜೂರಾತಿಗೆ ಹೆಚ್ಚು ಲಂಚ ಪಡೆದಿದ್ದರೆ ಅದೇ ರೀತಿಯಲ್ಲಿ ಜಿಲ್ಲೆಯ ಗ್ರಾಮೀಣಾಭಿವೃದ್ದಿ ಹೊಣೆ ಹೊಂದಿರುವ ಆರ್‌ಡಿಪಿಆರ್‌ ವಿಶೇಷವಾಗಿ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಫಲಾನುಭವಿಗಳಿಗೆ ಅನುದಾನ ಮಂಜೂರಾತಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡುವ ವೇಳೆ ಲಂಚಕ್ಕೆ ಕೈಯೊಡ್ಡಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.

6 ವರ್ಷದಲ್ಲಿ 50 ಪ್ರಕರಣ ದಾಖಲು

ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದಲ್ಲಿ 2016 ರಿಂದ 2021ರ ವರೆಗೂ ಒಟ್ಟು 50 ಲಂಚ ಪಡೆದ ಪ್ರಕರಣಗಳು ದಾಖಲಾಗಿದ್ದು ಆ ಪೈಕಿ 38 ಪ್ರಕರಣಗಳು ಟ್ರ್ಯಾಪ್‌ ಆದರೆ 7 ಡಿಎ, 2 ಸಚ್‌ರ್‍, 1 ಪ್ಯಾರಾ-5 ಹಾಗೂ ಪಿಸಿಆರ್‌ ಹಾಗೂ ಇತರೇ ಸೇರಿ 2 ಲಂಚ ಪಡೆದ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಹಿರಿಯ ಅಧಿಕಾರಿಗಳು ಕನ್ನಡಪ್ರಭಗೆ ಮಾಹಿತಿ ನೀಡಿದ್ದಾರೆ. ಕೊರೋನಾ ಲಾಕ್‌ಡೌನ್‌ ಮತ್ತಿತರ ಕಾರಣಗಳಿಂದ ಒಂದೂವರೆ ವರ್ಷದಿಂದ ಲಂಚ ಪಡೆದ ಪ್ರಕರಣಗಳು ದಾಖಲಾಗಿಲ್ಲ ಎಂದಿದ್ದಾರೆ.

ವರ್ಷ ಒಟ್ಟು ಪ್ರಕರಣ

2016 6

2017 8

2018 9

2019 14

2020 10

2021 3


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ