ಚೆನ್ನೈ: ಕರ್ನಾಟಕ ಕೇಡರ್ನ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈಗೆ ಅದೃಷ್ಟ ಒಲಿದು ಬಂದಿದೆ. ಸಂಪುಟ ವಿಸ್ತರಣೆ ಬೆನ್ನಲ್ಲೇ ಅಣ್ಣಮಲೈರನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಿಸಲಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ಎಲ್.ಮುರುಗನ್ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರ ಹುದ್ದೆಗೆ ಅಣ್ಣಮಲೈರನ್ನು ನೇಮಿಸಲಾಗಿದೆ. ಖಡಕ್ ಅಧಿಕಾರಿಯಾಗಿ ಗುರುತ್ತಿಸಿಕೊಂಡಿದ್ದ ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರಕುರುಚಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಎದುರಿಸಿ ಸೋಲು ಕಂಡಿದ್ದರು. ಈಗ ಅವರ ರಾಜಕೀಯ ಜೀವನಕ್ಕೆ ಹೊಸ ದಿಕ್ಕು ಸಿಕ್ಕಿದೆ.
2024 ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಬಿಜೆಪಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಎಲ್ ಮುರುಗನ್ರನ್ನು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೇರಿ ಖಾತೆ ಸಚಿವರನ್ನಾಗಿ ಮಾಡಿದೆ.
ತೆರವಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಕೆ. ಅಣ್ಣಾಮಲೈ ನೀಡಲಾಗಿದೆ. ಚುನಾವಣೆ ಸೋಲಿನ ಬಳಿಕವೂ ಒಳ್ಳೆಯ ರಾಜಕೀಯ ನಾಯಕನನ್ನಾಗಿ ಮಾಡುವ ಉದ್ದೇಶದಿಂದ ಬಿಜೆಪಿ ಒಳ್ಳೆಯ ಅವಕಾಶವನ್ನು ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪಕ್ಷ ಕಟ್ಟುವಲ್ಲಿ ಕಟ್ಟಾಳಾಗಿ ಅಣ್ಣಾಮಲೈರನ್ನು ಬಳಸಿಕೊಳ್ಳಬಹುದು ಎಂಬುದು ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ. ಹೀಗಾಗಿಯೇ ಮಾಜಿ ಐಪಿಎಸ್ ಕೆ. ಅಣ್ಣಾಮಲೈಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಒಲಿದು ಬಂದಿದೆ. ಅಣ್ಣಾಮಲೈ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ವೈಯಕ್ತಿಕ ವರ್ಚಸ್ಸು, ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಪಕ್ಷವನ್ನು ಮುನ್ನಡೆಸುವ ಉತ್ಸಾಹಿ ಯುವ ರಾಜಕಾರಣಿಯಾಗಬಲ್ಲರು ಅನ್ನುತ್ತಿದೆ ತಮಿಳುನಾಡು ಬಿಜೆಪಿ ವಲಯ.