*ಗೋಕಾಕ*- ಪ್ರವಾಹದ ಸಂದರ್ಭದಲ್ಲಿ ಘಟಪ್ರಭಾ ನದಿಯ ನೀರಿನ ಸೆಳೆತಕ್ಕೆ ಸಿಕ್ಕು ಮೃತಪಟ್ಟ ತಾಲ್ಲೂಕಿನ ಹಡಗಿನಾಳ ಗ್ರಾಮದ ಮುತ್ತೆಪ್ಪ ಶಿವನಾಯಿಕ ನಾಯಿಕ(48) ಅವರ ಕುಟುಂಬ ವರ್ಗಕ್ಕೆ ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಸರ್ಕಾರದಿಂದ 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಡಕಲ್ ಜಲಾನಯನ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಘಟಪ್ರಭಾ ನದಿಗೆ ಪ್ರವಾಹ ಎದುರಾಗಿತ್ತು. ಹಡಗಿನಾಳದ ಮುತ್ತೇಶ್ವರ ದೇವಸ್ಥಾನದ ಬಳಿ ನದಿಯಲ್ಲಿ ನೀರಿನ ಸೆಳೆತಕ್ಕೆ ಗ್ರಾಮದ ಮುತ್ತೆಪ್ಪ ನಾಯಿಕ ಎಂಬುವರು ಅ. 6 ರಂದು ಮೃತಪಟ್ಟಿರುವುದು ನೋವಿನ ವಿಚಾರ. ಮೃತಪಟ್ಟ ಕುಟುಂಬ ವರ್ಗದವರಿಗೆ ಸಾಂತ್ವನ ಮಾತುಗಳನ್ನಾಡಿದ ಅವರು, ಮುಂದೆಯೂ ಸಹ ಕುಟುಂಬದ ಕಷ್ಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.
ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಕುಟುಂಬ ವರ್ಗಕ್ಕೆ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುತ್ತಿದೆ. ಈ ಮೊತ್ತವನ್ನು ಕುಟುಂಬಸ್ಥರು ಸದ್ಭಳಕೆ ಮಾಡಿಕೊಳ್ಳುವಂತೆ ಅವರು ಹೇಳಿದರು.
ಗೋಕಾಕ ತಹಶೀಲ್ದಾರ ಡಾ. ಮೋಹನ ಭಸ್ಮೆ, ಮೂಡಲಗಿ ತಹಶೀಲ್ದಾರ ಮಹಾದೇವ ಸಣ್ಮುರಿ, ತಾ.ಪಂ. ಮಾಜಿ ಸದಸ್ಯ ನಾಗಪ್ಪ ಮಂಗಿ, ಕೌಜಲಗಿ ಕಂದಾಯ ನಿರೀಕ್ಷಿಕ ಸುಂದರ ಪೂಜೇರಿ, ಗ್ರಾಮ ಆಡಳಿತ ಅಧಿಕಾರಿ ಜಾಹೀರ ನದಾಫ, ವಿಠ್ಠಲ ಆಡಿನ, ಸಿದ್ಧಾರೂಢ ಕಲ್ಲೊಳಿ ಸೇರಿದಂತೆ ಹಡಗಿನಾಳ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.