ಗೋಕಾಕದಲ್ಲಿಂದು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಬಾಲಚಂದ್ರ ಜಾರಕಿಹೊಳಿ
ಗೋಕಾಕ್- ಅಸ್ಪೃಶ್ಯತೆ ನಿವಾರಣೆಗಾಗಿ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ಪುರುಷರು ಅಂಬೇಡ್ಕರ್ ಆಗಿದ್ದರು ಎಂದು ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರವಿವಾರದಂದು ನಗರದ ಎನ್ಎಸ್ಎಫ್ ಕಛೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೩ ನೇ ಜಯಂತಿ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನಲ್ಲಿಯೇ ಅತೀ ದೊಡ್ಡದಾದ ಸಂವಿಧಾನವನ್ನು ರಚಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಅಸ್ಪೃಶ್ಯರಿಗಾಗಿ ಹಾಗೂ ಅವರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಸದಾಕಾಲ ಹೋರಾಟ ಮಾಡಿದ್ದರು. ವರ್ಣ ವ್ಯವಸ್ಥೆ, ಅದರಲ್ಲೂ ಬ್ರಿಟಿಷರ ವಿರುದ್ಧವಾಗಿ ಹೋರಾಟವನ್ನು ಮಾಡಿದ್ದರು. ಶಿಕ್ಷಣದ ಅರಿವು ಮೂಡಿಸುವಲ್ಲಿಯೂ ಸಾಕಷ್ಟು ಶ್ರಮಿಸಿದ್ದರು. ಸಾಮಾಜಿಕ
ಬದಲಾವಣೆಗಾಗಿ ಶಿಕ್ಷಣವೊಂದೇ ಪ್ರಬಲ ಅಸ್ತ್ರವೆಂದು ಪ್ರತಿಪಾದಿಸಿದ್ದರು ಎಂದು ಅವರು ಹೇಳಿದರು.
ಅಸ್ಪೃಶ್ಯತೆಯ ಮತ್ತು ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಪ್ರಬಲವಾಗಿ ಧ್ವನಿಯೆತ್ತುತ್ತಿದ್ದರು. ಬುದ್ಧ, ಬಸವ, ಅಂಬೇಡ್ಕರ್ ಅವರಂತಹ ಮಹಾನ್ ಪುರುಷರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಒಂದೇ ಸಮುದಾಯಕ್ಕೆ ಸಿಮೀತಮಾಡದೇ ಪ್ರತಿಯೊಬ್ಬರೂ ಗೌರವಿಸಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದರು.
ದಲಿತರ ಹಕ್ಕುಗಳಿಗಾಗಿ ಹೋರಾಡಿದ ಸಾಮಾಜಿಕ ಚಳುವಳಿಗಳಲ್ಲಿ ಅಂಬೇಡ್ಕರ್ ಮಹತ್ತರ ಪಾತ್ರ ವಹಿಸಿದ್ದರು.ಶಿಕ್ಷಣ, ಸಂಘಟನೆ, ಹೋರಾಟ ಇವರ ಮಹತ್ವಾಕಾಂಕ್ಷೆ ಯಾಗಿತ್ತು. ಅಂಬೇಡ್ಕರ್ ಅವರು ಕೇವಲ ಭಾರತರತ್ನ ಅಲ್ಲ. ಅವರು ವಿಶ್ವರತ್ನ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಣ್ಣಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಬಾಲಚಂದ್ರ ಜಾರಕಿಹೊಳಿಯವರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರಮೇಶ ಮಾದರ, ಬಸವರಾಜ ಕಾಡಾಪೂರ, ಘಟಪ್ರಭಾ ಜೆಜಿಕೋ ಆಸ್ಪತ್ರೆಯ ನಿರ್ದೇಶಕ ಶಂಕರ ದಳವಾಯಿ, ಸಿದ್ದು ಕಂಕಣವಾಡಿ, ಅಡಿವೆಪ್ಪ ಗೌಳಿ, ದಲಿತ ಸಂಘಗಳ ಪ್ರಮುಖರು, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.