Breaking News

*ಢವಳೇಶ್ವರ ಗ್ರಾಮಸ್ಥರ ಒಗ್ಗೂಡಿಕೆ ಕಾರ್ಯ ಶ್ಲಾಘನೀಯವಾದದ್ದು : ಶಾಸಕ ಬಾಲಚಂದ್ರ ಜಾರಕಿಹೊಳಿ*


*ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಉಳಿಮುಟ್ಟದ ರಂಗೇಶ್ವರ, ಶಿವ ದೇವಾಲಯ ಹಾಗೂ ಲಕ್ಷ್ಮೀ ದೇವಸ್ಥಾನಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

*ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಭಾಗಿ*

 

     *ಮೂಡಲಗಿ* : ಢವಳೇಶ್ವರ ಗ್ರಾಮದಲ್ಲಿ ಎಲ್ಲರೂ ಭಕ್ತಿ ಭಾವದಿಂದ ಸುಮಾರು ಮೂರುವರೆ ಕೋಟಿ ರೂ. ವೆಚ್ಚದಲ್ಲಿ ರಂಗೇಶ್ವರ, ಶಿವ ಮತ್ತು ಲಕ್ಷ್ಮೀ ದೇವಸ್ಥಾನಗಳನ್ನು ಒಂದೆಡೆ ನಿರ್ಮಿಸುವ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಗುರುವಾರದಂದು ತಾಲೂಕಿನ ಢವಳೇಶ್ವರ(ಹೊಸ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಉಳಿಮುಟ್ಟದ ರಂಗೇಶ್ವರ, ಶಿವ ದೇವಾಲಯ ಹಾಗೂ ಲಕ್ಷ್ಮೀ ದೇವಸ್ಥಾನಗಳನ್ನು ಉದ್ಘಾಟಿಸಿ, ಮೂರ್ತಿ ಪ್ರಾಣ ಪ್ರತಿಷ್ಠಾನ ಹಾಗೂ ಕಳಸಾರೋಹಣ ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಅವರು, ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಗ್ರಾಮಸ್ಥರು ಇಡೀ ಜಿಲ್ಲೆಯು ಮೆಚ್ಚುವಂತೆ ಅಚ್ಚುಕಟ್ಟಾದ ಕಲ್ಲಿನಿಂದ ದೇವಸ್ಥಾನಗಳನ್ನು ನಿರ್ಮಿಸಿರುವುದು ಅವರ ಭಕ್ತಿ ಕಾರ್ಯಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

   ಢವಳೇಶ್ವರ ಗ್ರಾಮದ ಇತಿಹಾಸವನ್ನು ಅಧ್ಯಯನ ಮಾಡಿದಾಗ, ಇಲ್ಲಿಯ ಉಳಿಮುಟ್ಟದ ರಂಗೇಶ್ವರನ ಪವಾಡ ಅಗಾಧವಾಗಿದೆ. ಇಲ್ಲಿರುವ ಹನುಮಂತನ ಮೂರ್ತಿಯನ್ನು ಬೇರೆಯವರು ಒಯ್ದಾಗ ಸ್ವತಃ ಹನಮಂತನು(ರಂಗೇಶ್ವರ) ಯಾವುದೇ ಉಳಿಮುಟ್ಟದೇ ತಾನಾಗಿಯೇ ಉದ್ಭವಿಸಿದ್ದಾನೆ. ಇದು ಈ ಗ್ರಾಮಸ್ಥರ ನಂಬಿಕೆ ಹಾಗೂ ಭಕ್ತಿ ವಿಶ್ವಾಸಕ್ಕೆ ಕಾರಣವಾಗಿದೆ. ಪೂರ್ವಜರಿಂದ ಈ ಮಾತುಗಳು ನಮಗೆ ಕೇಳಿಸಲ್ಪಟ್ಟಿವೆ ಎಂದು ಅವರು ತಿಳಿಸಿದರು.

   ನಮ್ಮ ಭಾರತೀಯ ಸಂಸ್ಕೃತಿಯನ್ನು ನೋಡಿದಾಗ ಇಲ್ಲಿ ಎಲ್ಲ ಜನಾಂಗದವರು, ವಿವಿಧ ಧರ್ಮಿಯರು ವಾಸವಾಗಿದ್ದಾರೆ. ಆದರೆ ಪೂಜಿಸಲ್ಪಡುವ ದೇವರು ಒಂದೇ. ಹೀಗಾಗಿ ಭಾರತವು ಇಡೀ ಪ್ರಪಂಚದಲ್ಲಿಯೇ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ಏಕಮೇವ ರಾಷ್ಟ್ರವಾಗಿದೆ ಎಂದು ಹೇಳಿದ ಅವರು, ನಾವು ದೈವಿ ಭಕ್ತರು. ದೇವರನ್ನು ಅಪಾರವಾಗಿ ನಂಬುತ್ತೇವೆ. ದೇವರಿಂದಲೇ ಈ ಜಗತ್ತು ನಡೆಯುತ್ತಿದೆ ಎಂದು ಹೇಳಿದರು.

   ಢವಳೇಶ್ವರ ಗ್ರಾಮಕ್ಕೆ ಅಗತ್ಯವಿರುವ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತೇನೆ. ಗ್ರಾಮದ ವಿಕಾಸಕ್ಕಾಗಿ ಈಗಾಗಲೇ ಸರ್ಕಾರದ ಹಲವಾರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಢವಳೇಶ್ವರದಲ್ಲಿ ಉಳಿಮುಟ್ಟದ ರಂಗೇಶ್ವರನ ದೇವಸ್ಥಾನ ನಿರ್ಮಿಸುವ ಮೂಲಕ ಈ ಭಾಗದ ಭಕ್ತರು ಹನುಮಂತ ದೇವರ ಆರಾಧಕರಾಗಿದ್ದಾರೆ. ನಮ್ಮ ಶ್ರೀಶೈಲ ಪೀಠಕ್ಕೂ ಮತ್ತು ಹನಮಂತ ದೇವರಿಗೆ ಅವಿನಾಭಾವ ಸಂಬಂಧವಿದೆ. ಜೊತೆಗೆ ಎಡೆಯೂರು ವೀರಭದ್ರೇಶ್ವರನಿಂದ ಲಿಂಗ ದೀಕ್ಷೆಯನ್ನು ಪಡೆದಿರುವ ಹನುಮಂತನು ಬುದ್ಧಿ, ಭಕ್ತಿ ಮತ್ತು ಶಕ್ತಿಯ ಸಂಕೇತವಾಗಿದ್ದಾನೆ. ಬುದ್ಧಿವಂತರಲ್ಲಿ ಅತೀ ಬುದ್ಧಿವಂತನಾಗಿರುವ ಹನುಮಂತನು ರಾಮನ ಪರಮ ಭಕ್ತನು. ಸೂರ್ಯನಷ್ಟೇ ವೇಗವಾಗಿ ಚಲಿಸಿ ಸೂರ್ಯನಿಂದ ವಿದ್ಯೆ ಪಡೆದಿರುವ ಹನುಮಂತನ ಪವಾಡವು ಜಗತ್ತಿನಾದ್ಯಂತ ಪ್ರಖ್ಯಾತಗೊಂಡಿದೆ ಎಂದು ಅವರು ಆಶೀರ್ವಚನ ನೀಡಿದರು.

   ಮರೆಗುದ್ದಿಯ ನಿರುಪಾದೀಶ್ವರ ಮಹಾಸ್ವಾಮಿಗಳು, ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ಬೀಳಗಿಯ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು, ಮಹಾದೇವಿ ಅಕ್ಕನವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

   ವೇದಿಕೆಯಲ್ಲಿ ಢವಳೇಶ್ವರ ಗ್ರಾಪಂ ಅಧ್ಯಕ್ಷೆ ಶಾಂತವ್ವ ಪೂಜೇರಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಪ್ರದೇಶ ಕುರುಬರ ಸಂಘದ ನಿರ್ದೇಶಕ ಡಾ.ರಾಜೇಂದ್ರ ಸಣ್ಣಕ್ಕಿ, ಕೆ.ಕೆ. ಜಾಲಿಬೇರಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ಈರಣ್ಣ ಜಾಲಿಬೇರಿ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಸುರೇಶ ಪಾಟೀಲ, ಉದ್ಯಮಿ ಶ್ರೀಕಾಂತ ಕದಂ, ಸುಭಾಸ ವಂಟಗೋಡಿ, ಡಾ.ಬಿ.ಬಿ. ಬಾಗೇವಾಡಿ, ರಂಗಪ್ಪ ಅವರಾದಿ, ವೆಂಕಣ್ಣಾ ಅಂಬಲಜೇರಿ, ಕೃಷ್ಣಾ ಪಾಟೀಲ, ಅಶೋಕ ಹಿರಡ್ಡಿ, ಶ್ರೀಕಾಂತ ಚನ್ನಾಳ, ಮಹಾದೇವ ಕೋಟಿ, ತಮ್ಮಾಸಾಹೇಬ ನಾಯಿಕ, ನರೇಂದ್ರ ನಾಡಗೌಡ, ರಂಗಪ್ಪ ಕಳ್ಳಿಗುದ್ದಿ, ರಾಮಪ್ಪ ಪೂಜೇರಿ, ರಂಗಪ್ಪ ಹೊನಕುಪ್ಪಿ, ಶಂಕರ ಪೂಜೇರಿ, ಭೀಮಪ್ಪ ಕಂಬಳಿ, ಭೀಮಪ್ಪ ಢವಳೇಶ್ವರ, ಬಿಇಓ ಅಜೀತ ಮನ್ನಿಕೇರಿ, ಮೂಡಲಗಿ ತಾಪಂ ಇಓ ಎಫ್.ಜಿ. ಚಿನ್ನನ್ನವರ, ಪಿಎಸ್‍ಐ ಎಚ್.ವಾಯ್. ಬಾಲದಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶೈಲಶ್ರೀ ಕೊಕ್ಕರಿ ಮತ್ತು ಶಿಕ್ಷಕ ಬಿ.ಎಲ್. ಘಂಟಿ ಅವರು ಕಾರ್ಯಕ್ರಮ ನಿರೂಪಿಸಿದರು.

*ಈ ಭಾಗದ ಶಾಸಕರಾಗಿ ಬಾಲಚಂದ್ರ ಜಾರಕಿಹೊಳಿ ಅವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಇಡೀ ನಾಡೇ ಮೆಚ್ಚುವಂತಹ ಪ್ರಗತಿಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಕೇವಲ ಶಾಸಕರಾಗಿರದೇ ಅರಭಾವಿ ಕ್ಷೇತ್ರದ ಪ್ರತಿಯೊಬ್ಬ ಮನೆ ಮನಗಳಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಗುರುತಿಸಿಕೊಂಡಿದ್ದಾರೆ. ಜೊತೆಗೆ ದೈವ ಭಕ್ತಿಯನ್ನು ಅಪಾರವಾಗಿ ನಂಬಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನಸೇವೆ ಮಾಡುವ ಪ್ರಾಪ್ತಿಯನ್ನು ಭಗವಂತನು ಕರುಣಿಸಲಿ*. 
   *ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠ*

About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ