ಯಮಕನಮರಡಿ: ಕಾಂಗ್ರೆಸ್ ಪಕ್ಷದ 135 ಅಭ್ಯರ್ಥಿಗಳು ಗೆಲುವು ಸಾಧಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಕಾರಣಿಕರ್ತರಾದ ಮುಖಂಡರಿಗೆ, ಮತದಾರರಿಗೆ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದರು.
ಯಮಕನಮರಡಿ ಮತಕ್ಷೇತ್ರದ ಅರಳಿಕಟ್ಟಿ ಗ್ರಾಮದ ಮುಖಂಡ ಕರುಣಾಕರ ಶೆಟ್ಟಿಯವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕುಂದುಕೊರತೆಗಳ ಸಭೆ ಹಾಗೂ ಬನ್ನಿಬಾಗಿ, ಚಿಲಬಾಂವಿ, ಜಾರಕಿಹೊಳಿ ಗ್ರಾಮಸ್ಥರಿಂದ ಜರುಗಿದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಹಾಗೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೈಗೊಂಡ ಜನಪರ ಯೋಜನೆಗಳಿಂದ ವಿಧಾನಸಭೆ ಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ, ನಾವು ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಐದು ಭರವಸೆಗಳಲ್ಲಿ ಮೂರು ಭರವಸೆಗಳನ್ನ ಈಡೇರಿಸಿದ್ದು, ಇನ್ನೇರಡು ಭರವಸೆಗಳನ್ನು ಶೀಘ್ರದಲ್ಲೇ ಈಡೇರಿಸುತ್ತೇವೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳನ್ನು ಹೇಗೆ ನೀಡುತ್ತಾರೆ.? ಹೇಗೆ ದುಡ್ಡು ಹೊಂದಿಸುತ್ತಾರೆ ಎಂಬ ಪ್ರಶ್ನೆ ಬಿಜೆಪಿಯವರು ಸೇರಿದಂತೆ ಹಲವರಲ್ಲಿ ಮೂಡಿತ್ತು. ಆದರೆ ಸಿಎಂ ಸಿದ್ದರಾಮಯ್ಯನವರ ಆರ್ಥಿಕ ನೀತಿಯಿಂದ 40 ಸಾವಿರ ಕೋಟಿ ರೂ. ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿಯೇ ಮೀಸಲಿಟ್ಟು, ಟೀಕೆ ಮಾಡಿದವರಿಗೆ ಉತ್ತರ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಎಷ್ಟೇ ಅಭಿನಂದನೆ ಸಲ್ಲಿಸಿದರೂ ಸಾಲದು ಎಂದರು.
ಯಮಕನಮರಡಿ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು, ಪ್ರಸ್ತುತ ಬಜೆಟ್ ನಲ್ಲಿ ಕಡಿಮೆ ಅನುದಾನ ಇದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನಷ್ಟು ರಸ್ತೆಗಳನ್ನು ಸುಧಾರಣೆ ಮಾಡೋಣ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ನಮ್ಮ ಇಲಾಖೆಯಿಂದ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಶಿಕಾಂತ ನಾಯಿಕ, ಗುರು ಪಾಟೀಲ್, ಕರುಣಾಕರ ಶೆಟ್ಟಿ, ಅಬ್ದುಲ್ ಘನಿ ದರ್ಗಾ ಸೇರಿದಂತೆ ಅರಳಿಕಟ್ಟಿ, ಬನ್ನಿಬಾಗಿ, ಚಿಲಬಾಂವಿ, ಜಾರಕಿಹೊಳಿ ಗ್ರಾಮದ ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.